ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಮತ್ತು ಅರೇಹಳ್ಳಿ ಸುತ್ತ-ಮುತ್ತ ಜನರಿಗೆ ಹಾವಳಿ ನೀಡುತ್ತಿರುವ 3 ಪುಂಡಾನೆಗಳನ್ನು ಪತ್ತೆಹಚ್ಚಲಾಗಿದೆ. ಕೂಡಲೇ ಆ ಆನೆಗಳನ್ನು ಸೆರೆ ಹಿಡಿಯಲು ಹಾಗೂ ಇದೇ ಪ್ರದೇಶದಲ್ಲಿ ಆನೆ ಕಾರ್ಯಪಡೆಯ ಕಚೇರಿ ಸ್ಥಾಪಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಬಿ.ಖಂಡ್ರೆ ಸೂಚಿಸಿದ್ದಾರೆ.
ಬೇಲೂರು ತಾಲ್ಲೂಕು ಕೋಗೋಡಿನ ತೋಟದಲ್ಲಿ ಶುಕ್ರವಾರ(ನಿನ್ನೆ) ಮಹಿಳೆಯೊಬ್ಬರು ಆನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು(ಮಾರ್ಚ್.15) ಅರಣ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಹಾಸನ ವಲಯಕ್ಕೆ 2 ಥರ್ಮಲ್ ಕ್ಯಾಮರಾ ಸಹಿತ ಡ್ರೋನ್ ಖರೀದಿಸಿ ರಾತ್ರಿ ವೇಲೆ ಸಹ ಕಾಡಾನೆ ಸಂಚಾರದ ಬಗ್ಗೆ ನಿಗಾ ಇಟ್ಟು, ಸ್ಥಳೀಯರಿಗೆ ಸಕಾಲದಲ್ಲಿ ಮಾಹಿತಿ ನೀಡಬೇಕು ಎಂದು ಆದೇಶಿಸಿದರು.
ಆನೆಗಳ ಸಮಸ್ಯೆ ಹೆಚ್ಚಿರುವ ಪ್ರದೇಶದಲ್ಲಿ ತುರ್ತು ಸ್ಪಂದನೆಗಳಾಗಿ ಎರಡು ಹೆಚ್ಚುವರಿ ಜೀಪುಗಳು ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಅಲ್ಲದೇ ಕಾಡಾನೆ ಸಂಚಾರದ ಬಗ್ಗೆ ಜನತೆಯಿಂದ ಮಾಹಿತಿ ಬಂದ ಕೂಡಲೇ ಸ್ಪಂದಿಸಬೇಕು ಎಂದು ಹೇಳಿದರು.





