Mysore
17
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಹೂಡಿಕೆದಾರರ ಸಮಾವೇಶ: 6 ಲಕ್ಷ ಉದೋಗ ಖಾತ್ರಿ

ಬೆಂಗಳೂರು: ನಾಲ್ಕು ದಿನಗಳ ಕಾಲ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.

ಸಮಾವೇಶಕ್ಕೆ ತೆರೆ ಬಿದ್ದ ಬಳಿಕ ಅವರು ಅರಮನೆ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಲಯವಾರು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು. ಜತೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉಪಸ್ಥಿತರಿದ್ದರು.

ಹೂಡಿಕೆದಾರರ ಸಮಾವೇಶದ ಸಾಧನೆಗಳ ಬಗ್ಗೆ ಮಾತನಾಡಿದ ಸಚಿವರು, `ಇನ್ನೂ ಕೆಲವು ಪ್ರತಿಷ್ಠಿತ ಕಂಪನಿಗಳು ಭಾರೀ ಹೂಡಿಕೆಗೆ ಆಸಕ್ತಿ ತೋರಿದ್ದು, ಒಡಂಬಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇವು ಆಖೈರಾದರೆ ಸಮಾವೇಶದ ಮೂಲಕ ಬರಲಿರುವ ಬಂಡವಾಳದ ಮೊತ್ತ ಇನ್ನೂ ಗಮನಾರ್ಹವಾಗಿ ಏರಲಿದೆ. ಈಗ ಖಾತ್ರಿಯಾಗಿರುವ ಹೂಡಿಕೆಯಲ್ಲಿ ಶೇಕಡ 75ರಷ್ಟು ಬೆಂಗಳೂರಿನ ಆಚೆ ಇರುವ ಪ್ರದೇಶಗಳಿಗೆ ಹೋಗಲಿದ್ದು, ಶೇಕಡ 45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಹರಿಯಲಿದೆ’ ಎಂದರು.

ಸೃಷ್ಟಿಯಾಗಲಿರುವ 6 ಲಕ್ಷ ಉದ್ಯೋಗಗಳು ತಯಾರಿಕೆ ಮತ್ತು ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಸೇರಿವೆ. ಹೂಡಿಕೆಗಳಲ್ಲಿ ಜಿಂದಾಲ್ ಸಮೂಹವು ಇಂಧನ, ಸಿಮೆಂಟ್, ಉಕ್ಕು ಮತ್ತು ಪೂರಕ ಉದ್ಯಮಗಳಲ್ಲಿ 1.2 ಲಕ್ಷ ಕೋಟಿ ರೂ. ಹೂಡುತ್ತಿದೆ. ಬಲ್ದೋಟಾ ಸಮೂಹವು ಕೊಪ್ಪಳದಲ್ಲಿ 54 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ. ಲ್ಯಾಮ್ ರೀಸರ್ಚ್ ಕಂಪನಿಯು ತಯಾರಿಕೆ ಮತ್ತು ಸಂಶೋಧನೆಗೆ 10 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಬಂಡವಾಳ ತೊಡಗಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಿಕ್ಕಂತೆ, ಸ್ನೀಡರ್ ಎಲೆಕ್ಟ್ರಿಕ್ ಸಂಸ್ಥೆಯು ವಿದ್ಯುತ್ ಸಾಧನಗಳ ತಯಾರಿಕೆ ಮತ್ತು ಸಂಶೋಧನೆಗೆ 2,247 ಕೋಟಿ ರೂ, ವೋಲ್ವೊ ಕಂಪನಿಯು ವಿದ್ಯುಚ್ಚಾಲಿತ ಬಸ್/ಟ್ರಕ್ ತಯಾರಿಕೆಗೆ 1,400 ಕೋಟಿ ರೂ, ಹೋಂಡಾ ಕಂಪನಿಯು ಇ.ವಿ. ವಾಹನಗಳ ತಯಾರಿಕೆಗೆ 600 ಕೋಟಿ ರೂ. ಮತ್ತು ಸ್ಯಾಫ್ರಾನ್ ಕಂಪನಿಯು ಏವಿಯಾನಿಕ್ಸ್ ಉತ್ಪಾದನೆಗೆ 225 ಕೋಟಿ ರೂ. ಹೂಡುತ್ತಿವೆ. 2025-30ರವರೆಗಿನ ನೂತನ ಕೈಗಾರಿಕಾ ನೀತಿಯಡಿ ಒಟ್ಟಾರೆಯಾಗಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಹೊಸ ನೀತಿಯಡಿಯಲ್ಲಿ ತುಮಕೂರು ಮತ್ತು ವಿಜಯಪುರದಲ್ಲಿ ಕೈಗಾರಿಕಾ ಪಾರ್ಕ್, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಪಾರ್ಕ್, ಉಳಿದ ಭಾಗಗಳಲ್ಲಿ ಡೀಪ್-ಟೆಕ್ ಪಾರ್ಕ್ ಮತ್ತು ಸ್ವಿಫ್ಟ್ ಸಿಟಿ ಮುಂತಾದವು ಅಸ್ತಿತ್ವಕ್ಕೆ ಬರಲಿವೆ. ಡೀಪ್ ಟೆಕ್ ಮತ್ತು ಸ್ವಿಫ್ಟ್ ಸಿಟಿ ಯೋಜನೆಗಳು ತಲಾ 1 ಲಕ್ಷ ಕೋಟಿ ರೂ. ಹೂಡಿಕೆ ಸೆಳೆಯುವ ಮತ್ತು ತಲಾ 1 ಲಕ್ಷ ಉದ್ಯೋಗ ಸೃಷ್ಟಿಸುವಂತಹ ಧಾರಣಾಶಕ್ತಿ ಹೊಂದಿವೆ. ಕ್ವಿನ್ ಸಿಟಿ ಅಭಿವೃದ್ಧಿಗೆ ಸಂಬಂಧಿಸಿದಂತೆ 10 ವಿ.ವಿ.ಗಳೊಂದಿಗೆ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಪಾಟೀಲ ನುಡಿದರು.

Tags:
error: Content is protected !!