ಬೆಂಗಳೂರು: ನಮ್ಮ ಸರ್ಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಇಲಾಖೆ ಸಮೃದ್ಧಿ ಸಭಾಂಗಣದಲ್ಲಿ ಆಯೋಜಿಸಿದ್ದ, ಉತ್ಪಾದನೋತ್ತರ ಕೃಷಿ- ರೈತರ ಸಬಲೀಕರಣ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವರು, ಕಳೆದ ವರ್ಷ 2025ರಲ್ಲಿ ನಡೆದ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಲಕ್ಷಾಂತರ ರೈತರು, ಸಾರ್ವಜನಿಕರು ಭಾಗವಹಿಸಿ ಮೇಳದ ಯಶಸ್ಸಿಗೆ ಕಾರಣರಾದರಲ್ಲದೆ ಯುವ ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಹಾಗೂ ಸಿರಿಧಾನ್ಯಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಅವಳವಡಿಸಿಕೊಳ್ಳಲು ಈ ಹಿಂದಿನ ಮೇಳಗಳು ಯಶಸ್ಸುಕಂಡಿವೆ ಎಂದು ತಿಳಿಸಿದರು..
ಈ ವರ್ಷ ನಮ್ಮ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ದೇಶದಲ್ಲಿ ಪ್ರಥಮವಾಗಿ “ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ”( Agriculture Beyond Production-Farmers Empowerment) ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ಕಾರ‍್ಯಕ್ರಮವನ್ನು ಇದೇ ಫೆಬ್ರವರಿ 6, 7 ಮತ್ತು 8 ರಂದು ಅರಮನೆ ಮೈದಾನದಲ್ಲಿ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು..
ಈ ಹಿಂದೆ ನಮ್ಮ ದೇಶ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು.. ಇಂದು ಬದಲಾದ ಸನ್ನಿವೇಶದಲ್ಲಿ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದ್ದು ಇತರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದೇವೆ. ಹಾಗೇಯೇ ಅಕ್ಕಿ ಉತ್ಪಾದನೆಯಲ್ಲಿ ಚೀನಾ ದೇಶವನ್ನು ಹಿಂದಕ್ಕೆ ಹಾಕಿರುವುದಾಗಿ ಸಚಿವರು ತಿಳಿಸಿದರು..
ಇನ್ನು ಈ ಬಾರಿಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ, ಹಾಗೂ ಬ್ರ‍್ಯಾಂಡಿಂಗ್ ಎಂಬ ಮೂರು ಉಪ ಧ್ಯೇಯಗಳೊಂದಿಗೆ ಕಾರ‍್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು..
ಉತ್ಪಾದನೆ ನಂತರ, ರೈತರಿಗೆ ನಿರಂತರ ಆದಾಯ ದೊರಕಿಸುವ ಸಲುವಾಗಿ ಕೃಷಿ ತ್ಯಾಜ್ಯಗಳ ಮರುಬಳಕೆ, ದೇಸಿ ತಳಿಗಳ ಸಂರಕ್ಷಣೆ, ಭೌಗೋಳಿಕ ಸೂಚ್ಯಾಂಕವಿರುವ ಉತ್ಪಾದನೆಗಳು(GI – Tag Products) ಬಳಸುವ ಬಗ್ಗೆ ನಮ್ಮ ಸರ್ಕಾರದಿಂದ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಕೃಷಿ ಉತ್ಪಾದನೆ ನಂತರ ಮೌಲ್ಯವರ್ಧನೆಗೆ ಒತ್ತು ಕೊಡಲು ಈಗಾಗಲೇ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಿದ್ದು, ಅದರ ಮೂಲಕ ರೈತರು ಕೃಷಿ ಸಂಸ್ಕರಣೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಇಂದು ಈ ವಿಷಯಗಳ ಬಗ್ಗೆ ಚರ್ಚಿಸಲು ಜರ್ಮನಿ, ಅಮೆರಿಕಾ, ವಿಯಟ್ನಾಮ್, ಕಾಂಬೋಡಿಯ ಹಾಗೂ ನಮ್ಮ ದೇಶದ ವಿವಿಧ ಭಾಗಗಳಿಂದ ಬಂದ 35ಕ್ಕಿಂತ ಹೆಚ್ಚು ತಜ್ಞರು, ನಮ್ಮ ರಾಜ್ಯದಿಂದ ಬಂದ ರೈತರು ಎಲ್ಲರೂ ಈ ಚರ್ಚೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಯಾಗಿ ಮಾಡುತ್ತೀರೆಂದು ಭಾವಿಸುತ್ತೇನೆ ಎಂದು ಹೇಳಿದರು..
ಕಾರ್ಯಕ್ರಮದಲ್ಲಿ ಹನ್ಸ್ ಜುರ್ಗೆನ್ ಕ್ಲೆನ್, GI-Z ಇಂಡಿಯ ಟೀಂ ಲೀಡರ್, ನರ್ಮಾತ ಶರ್ಮಾ GI- Z ಪ್ರಾಜೆಕ್ಟ್ ಮ್ಯಾನೆಜರ್,ಕೃಷಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ.ಸಿಂಗ್, ಸೇರಿದಂತೆ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳು ಗಣ್ಯರು ಭಾಗವಹಿಸಿದ್ದರು.





