ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಆನಾರೋಗ್ಯದ ಕಾರಣಕ್ಕಾಗಿ ಚಿಕಿತ್ಸೆ ಪಡೆಯಲೆಂದು 6 ವಾರಗಳ ಷರತ್ತುಬದ್ದ ಮಧ್ಯಂತರ ಜಾಮೀನು ನೀಡಿ ಅ.30 ರಂದು ಹೈಕೋರ್ಟ್ ಆದೇಶಿಸಿದೆ.
ನಿನ್ನೆ(ಅ.30) ಸಂಜೆ ಬಳ್ಳಾರಿ ಜೈಲಿನಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ದರ್ಶನ ಹೊರಬಂದಿದ್ದಾರೆ. ಬಳಿಕ ನೇರವಾಗಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್‌ನಲ್ಲಿ ವಿಂಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ತಮ್ಮ ಮಗನ ಹುಟ್ಟು ಹಬ್ಬವನ್ನು ಸಹ ಆಚರಿಸಿದ್ದಾರೆ.
ದೀಪಾವಳಿ ಹಬ್ಬ ಮುಗಿಸಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರುವ ತವಕದಲ್ಲಿದ್ದ ದರ್ಶನ್‌ಗೆ ಬೆಂಗಳೂರಿನ ಪೊಲೀಸರು ಇದೀಗ ಬಿಗ್‌ಶಾಕ್ ನೀಡಿದ್ದಾರೆ. ನ್ಯಾಯಾಲಯದ ಮಧ್ಯಂತರ ಜಾಮೀನುನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ದೀಪಾವಳಿಯಿಂದ ಸಾಲು ಸಾಲು ರಜೆಗಳಿದ್ದು ಕಾರಣ ಕೋರ್ಟ್ ಆದೇಶದ ಪೂರ್ಣ ಪ್ರತಿ ಪೊಲೀಸರಿಗೆ ಸಿಕ್ಕಿಲ್ಲ. ಆದೇಶ ಸಿಕ್ಕ ಬಳಿಕ ಪೊಲೀಸರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ತನಿಖಾ ತಂಡದ ಜೊತೆ ಮಹತ್ವದ ಸಭೆ ನಡೆಸಿರುವ ಪೊಲೀಸರು, ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ದರ್ಶನ್ ಪ್ರಭಾವಿ ವ್ಯಕ್ತಿ ಜೊತೆಗೆ ಅವರ ಅಭಿಮಾನ ಬಳಗವೂ ದೊಡ್ಡದಿದೆ. ಹೈಕೋರ್ಟ್ ನೀಡಿರುವ ಜಾಮಿನನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ವಾದವನ್ನು ಮುಂದಿಟ್ಟು ಪೋಲಿಸರು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.





