ಮೈಸೂರು: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಐಸಿಸಿ ಚಾಂಪಿಯನ್ ಟ್ರೋಫಿ-2025 ಪಂದ್ಯದಲ್ಲಿ ಗೆದ್ದ ಟೀ ಇಂಡಿಯಾ ತಂಡಕ್ಕೆ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಹಿನ್ನೆಲೆ ಗೆದ್ದ ಭಾರತ ತಂಡವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭಕೋರಿದ್ದಾರೆ.
ಭಾರತ ಗೆದ್ದಿದೆ.. ಈ ಸಲ ಕಪ್ ನಮ್ದೆ..: ಸಿಎಂ ಸಿದ್ದರಾಮಯ್ಯ
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಅಮೋಘ ಆಟದ ಮೂಲಕ ಭಾರತ ತಂಡ ಚಾಂಪಿಯನ್ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಡೀ ಪಂದ್ಯಾವಳಿಯಲ್ಲಿ ಸೋಲಿಲ್ಲದ ಸರದಾರರಾದ ಭಾರತೀಯ ತಂಡಕ್ಕೆ ಅಭಿನಂದನೆಗಳು ಎಂದು ಶುಭಕೋರಿದ್ದಾರೆ.
ಬೌಲಿಂಗ್, ಬ್ಯಾಟಿಂಗ್, ಕ್ಷೇತ್ರರಕ್ಷಣೆ ಹೀಗೆ ಎಲ್ಲಾ ವಿಭಾಗಗಳಲ್ಲೂ ನಮ್ಮವರ ಆಟ ಹುಬ್ಬೇರಿಸುವಂತಿತ್ತು. ಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತಾ, ನಿರಂತರವಾಗಿ ತಂಡವನ್ನು ಗೆಲುವಿನ ದಡ ಸೇರಿಸುತ್ತಿರುವ ನಾಡಿನ ಮನೆಮಗ ಕೆ.ಎಲ್. ರಾಹುಲ್ ಆಟ ಹೆಚ್ಚು ಖುಷಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶುಭಾಶಯಗಳು ಟೀಂ ಇಂಡಿಯಾ: ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ, ಚಾಂಪಿಯನ್ಸ್ ಟ್ರೋಫಿ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಟೀಂ ಇಂಡಿಯಾಗೆ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ರೋಹಿತ್ ಶರ್ಮಾ ಅವರ 76 ರನ್ ಮತ್ತು ಕೆಎಲ್ ರಾಹುಲ್ ಅವರ ಅಜೇಯ 34 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಟೀಂ ಇಂಡಿಯಾದ ಒಗ್ಗಟ್ಟಿನ ಪ್ರದರ್ಶನ ಶ್ಲಾಘನೀಯ. ಭಾನುವಾರ(ಮಾರ್ಚ್.9) ಕನಕಪುರದಲ್ಲಿ ಪಂದ್ಯಾವಳಿಯ ಕೊನೆಯ ಕ್ಷಣಗಳನ್ನು ವೀಕ್ಷಿಸಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರತಿಷ್ಠಿತ ChampionsTrophy-2025 ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ವೀರೋಚಿತ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡ ಹೊಸ ಇತಿಹಾಸ ನಿರ್ಮಿಸಿದೆ ಎಂದು ಹೇಳಿದ್ದಾರೆ.
ನಮ್ಮೆಲ್ಲರ ಹೆಮ್ಮೆಯ TeamIndia ಸಂಘಟಿತ ಹೋರಾಟ, ಅದ್ಭುತ ಪ್ರದರ್ಶನದಿಂದ ಇಡೀ ರಾಷ್ಟ್ರವೇ ಸಂಭ್ರಮದಿಂದ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಇಂತಹ ಅವಿಸ್ಮರಣೀಯ ವಿಜಯಕ್ಕೆ ಕಾರಣರಾದ ಆಟಗಾರರೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಶುಭಾಶಯ ತಿಳಿಸಿದ್ದಾರೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ಕ್ರಿಕೆಟ್ ತಂಡಕ್ಕೆ ಹಾರ್ದಿಕ ಅಭಿನಂದನೆಗಳು ಎಂದು ಶುಭಾಶಯ ಕೋರಿದ್ದಾರೆ.





