ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಪ್ರವೇಶಾತಿ ಶುಲ್ಕವನ್ನು ಶೇ.10 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟಿದೆ.
ಖಾಸಗಿ, ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ಹೆಚ್ಚುವರಿ ಶುಲ್ಕದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಖಾಸಗಿ ಅನುದಾನಿತ, ಅನುದಾನರಹಿತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಶುಕ್ರವಾರ(ಜೂ.14) ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಶುಲ್ಕವನ್ನು ಶೇ.15 ರಷ್ಟು ಹೆಚ್ಚಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿತ್ತು. ಆದರೆ ಅಂತಿಮವಾಗಿ 2024-25 ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕಾಲೇಜು, ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಶೇ.10 ಹೆಚ್ಚಿಸಲು ನಿರ್ಧರಿಸಲಾಯಿತು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ಪ್ರವೇಶಾತಿ ಶುಲ್ಕ ಶೇ.7 ಹೆಚ್ಚಳ ಮಾಡಲಾಗಿತ್ತು. ಸರ್ಕಾರಿ ಕಾಲೇಜುಗಳಲ್ಲಿ 40 ಸಾವಿರ ರೂ ಶುಲ್ಕ ಹೆಚ್ಚಿಸಲಾಗಿತ್ತು. ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 67-68 ಸಾವಿರ ರೂ, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಟೈಪ್ ಒಂದರಲ್ಲಿ 69 ಸಾವಿರ ಹಾಗೂ ಟೈಪ್ 2 ರಲ್ಲಿ 76 ಸಾವಿರ ರೂ ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಡೀಮ್ಡ್ ಮತ್ತು ಖಾಸಗಿ ವಿವಿ ಖಾಸಗಿ ಕಾಲೇಜುಗಳ ಶುಲ್ಕ 1.69ಲಕ್ಷ ರೂ ಮಾಡಲಾಗಿತ್ತು.
ಇವೆಲ್ಲಾದರ ಹೊರತಾಗಿಯೂ ಖಾಸಗಿ ಕೋಟ ಸೀಟುಗಳಿಗೆ ಆಯಾ ಕಾಲೇಜುಗಳು ಮನ ಬಂದಷ್ಟು ಶುಲ್ಕ ಪಡೆಯುತ್ತಿದ್ದವು. ಕೆಲವೊಂದು ಪ್ರತಿಷ್ಠಿತಿ ಕಾಲೇಜುಗಳಲ್ಲಂತೂ ಇಂಜಿನಿಯರಿಂಗ್ ಸೀಟು ಪಡೆಯಲು 6 ರಿಂದ 7 ಲಕ್ಷ ರೂ ನೀಡಬೇಕಿದೆ.