ಬೆಂಗಳೂರು : ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಎಲ್ಲಾ ಸ್ಲೀಪರ್ ಕೋಚ್ ಮತ್ತು ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಬಸ್ ಮಾಲೀಕರಿಗೆ ಸಾರಿಗೆ ಇಲಾಖೆಯು ಫೆ.28ರವರೆಗೆ ಗಡುವು ನೀಡಿದೆ.
ಅಗ್ನಿ ದುರಂತಗಳನ್ನು ತಡೆಗಟ್ಟಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಚಿತ್ರದುರ್ಗ ಖಾಸಗಿ ಬಸ್ ಅಗ್ನಿ ದುರಂತದ ನಂತರ ಸುರಕ್ಷತಾ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಳೆದ ತಿಂಗಳ 21 ರಂದು ಖಾಸಗಿ ಬಸ್ ಮಾಲೀಕರು, ಕೋಚ್ ನಿರ್ಮಾಣ ಕಂಪೆನಿಗಳ ಪ್ರತಿನಿಧಿಗಳು ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಬಸ್ ಬಾಡಿ ನಿರ್ಮಾಣ ವಿಧಾನ, ತುರ್ತು ನಿರ್ಗಮನ ದ್ವಾರಗಳ ಸಂಖ್ಯೆ, ಅಗ್ನಿಶಾಮಕ ಸಾಧನಗಳ ಅಳವಡಿಕೆ, ಎಮರ್ಜೆನ್ಸಿ ಎಕ್ಸಿಟ್ ಬಳಿ ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ 11 ನಿಯಮಗಳನ್ನು ಕಡ್ಡಾಯಗೊಳಿಸಲಾಗಿತ್ತು.
ಇನ್ನು ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ನಂದಿಸುವ ವಿಧಾನಗಳ ಬಗ್ಗೆ ಸೂಚನೆ ನೀಡಬೇಕು, ಗ್ಲಾಸ್ ಒಡೆದು ಹೊರಬರಲು ಹ್ಯಾಮರ‍್ಗಳನ್ನು ಇರಿಸಬೇಕು, ಪ್ರಯಾಣಿಕರಿಗೆ ಎಚ್ಚರಿಕೆ ಅಲಾರಂ ವ್ಯವಸ್ಥೆ ಮಾಡಬೇಕು ಹಾಗೂ ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ಸೌಲಭ್ಯ ಒದಗಿಸಬೇಕು ಎಂದು ಸಚಿವರು ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪೆನಿಗಳಿಗೆ ಎಚ್ಚರಿಕೆ ನೀಡಿದ್ದರು.
ಈ ನಿಯಮಗಳನ್ನು ಪಾಲಿಸದ ಬಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದ್ದು, ಫಿಟ್‌ನೆಸ್ ರದ್ದುಪಡಿಸುವುದು, ಬಸ್ ಸಂಚಾರಕ್ಕೆ ನಿರ್ಬಂಧ ಹಾಗೂ ದಂಡ ವಿಧಿಸುವ ಕ್ರಮಗಳೂ ಜಾರಿಯಾಗುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟಿದ್ದ ಕೆಎ 01-ಎಇ 5217 ನಂಬರಿನ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಲಾರಿಯೊಂದು ವೇಗವಾಗಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್‌ಗೂ ಆವರಿಸಿತ್ತು. ಚಿತ್ರದುರ್ಗದ ಅಗ್ನಿ ದುರಂತದ ಬಳಿಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಖಾಸಗಿ ಬಸ್‌ಗಳ ಸುರಕ್ಷತಾ ಮಾನದಂಡಗಳನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು.
ಅನುಸರಿಸಬೇಕಾದ ಕಡ್ಡಾಯ ನಿಯಮಗಳು
- ಸ್ಲೀಪರ್ ಬಸ್‌ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು
- ಸ್ಲೀಪರ್ ಬರ್ತ್‌ಗಳಲ್ಲಿ ಸ್ಲೈಡರ್ ತೆಗೆಯಬೇಕು
- ಫೈರ್ ಡಿಟೆಕ್ಷನ್ ಅನ್ನು ತಿಂಗಳೊಳಗೆ ಅಳವಡಿಸಬೇಕು
- 10 ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ
- ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್
- ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ
- ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್‌ಸಿ ಮಾಡಬೇಕು
- ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು
- ಪ್ರತಿ ಬಸ್ಸಿನಲ್ಲೂ ಚಾವಣಿಯ ಹ್ಯಾಚ್‌ಗಳೊಂದಿಗೆ ರೇಖಾಚಿತ್ರವನ್ನು ಪ್ರಯಾಣಿಕರಿಗೆ ಓದಲು ಅನುಕೂಲವಾಗುವಂತೆ ಪ್ರದರ್ಶಿಸಬೇಕು
- 12 ಮೀಟರ್ ಉದ್ದದ ಬಸ್ಸಿನಲ್ಲಿ ಕನಿಷ್ಠ 4 ತುರ್ತು ನಿರ್ಗಮನ ದ್ವಾರವಿರಬೇಕು, 12 ಮೀಟರ್‌ಗಿಂತ ಹೆಚ್ಚಿದ್ದರೆ ಕನಿಷ್ಠ 5 ಡೋರ್‌ಗಳಿರಬೇಕು.




