ಕಲಬುರಗಿ : ಕರ್ನಾಟಕ ಜನರ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಹಾಗೂ ಸ್ವಾಭಿಮಾನದ ಬದುಕು ನಿರ್ಮಿಸುವ ಉದ್ದೇಶದಿಂದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಗುರುಮಠಕಲ್ ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ 1.50 ಕೋಟಿ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುತ್ತಿದೆ. 4.30 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ 65 ಲಕ್ಷ ಮಹಿಳೆಯರು ಪ್ರತಿನಿತ್ಯ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಯುವನಿಧಿ ಯೋಜನೆಯಡಿಯಲ್ಲಿ 1.30 ಕೋಟಿ ಯುವಕರಿಗೆ ಲಾಭ ಸಿಗುತ್ತಿದೆ.
ರಾಜ್ಯದ 6.50 ಕೋಟಿ ಜನರಲ್ಲಿ ಅಂದಾಜು 4.80 ಕೋಟಿ ಜನರು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ವಾರ್ಷಿಕ 52,000 ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ.
ಇಂತಹ ಜನ ಪರ ಯೋಜನೆಗಳನ್ನು ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿದ್ದಾರೆ. ನಾವು ನಿಮ್ಮ ದುಡ್ಡನ್ನು ನಿಮಗೆ ವಾಪಸ್ ಕೊಡಬೇಕು ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಲ್ಲಿದ್ದಾಗ ನಿಮ್ಮ ದುಡ್ಡನ್ನು ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉಮೇಶ್ ಜಾಧವ್ ಕಲಬುರಗಿ ಸಂಸದರಲ್ಲ ಅವರೇನಿದ್ದರೂ ಚಿಂಚೋಳಿ ಎಂಪಿ. ನಮ್ಮ ಪಕ್ಷವನ್ನು ಹಾಗೂ ನಾಯಕರನ್ನು ಟೀಕಿಸುವಾಗ ಮಾತ್ರ ಅವರು ಬಾಯಿ ತೆಗೆಯುತ್ತಾರೆ. ಆದರೆ ಅಭಿವೃದ್ದಿ ವಿಚಾರ ಬಂದಾಗ ಮೌನವಾಗಿರುತ್ತಾರೆ. ಹಾಗಾಗಿ ಕಲಬುರಗಿ ಹಾಗೂ ಗುರುಮಠಕಲ್ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದರು.
ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. 40 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. 18171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಅನುದಾನ ಬಿಡುಗಡೆ ಮಾಡಲಿಲ್ಲ.
ಬಿಜೆಪಿಯವರು ಈ ಹಿಂದೆ ನೀಡಿದ ಭರವಸೆಯಂತೆ ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ಎಸ್ ಟಿಗೆ ಸೇರಿಸಬೇಕಾಗಿತ್ತು ಆದರೆ ಸಂಸದ ಈ ವಿಚಾರದಲ್ಲಿ ಯಾವ ಪ್ರಯತ್ನ ಮಾಡಲಿಲ್ಲ. ಇದು ಈ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಅರ್ಧಪಾಲು ರಾಜ್ಯ ಸರ್ಕಾರದ್ದೂ ಇದೆ. ಆದರೆ, ಕೇಂದ್ರ ಸರ್ಕಾರ ಇವುಗಳನ್ನು ತನ್ನದೇ ಗ್ಯಾರಂಟಿ ಎಂದು ಬಿಂಬಿಸುತ್ತಿದೆ ಎಂದು ಕುಟುಕಿದರು.
ಖರ್ಗೆ ಸಾಹೇಬರ ಕರ್ಮಭೂಮಿಯಾದ ಗುರುಮಠಕಲ್ ಕ್ಷೇತ್ರದ ಜನರು ಈ ಸಲ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು. ಯಾಕೆಂದರೆ ಈ ಭಾಗ ಕಳೆದ ಐದು ವರ್ಷದಿಂದ ಅಭಿವೃದ್ದಿಯಿಂದ ವಂಚಿತವಾಗಿದೆ. ಅಭಿವೃದ್ದಿ ಹಾಗೂ ಯುವಕರ ಭವಿಷ್ಯದ ಹಿತದೃಷ್ಠಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ರಾಧಾಕೃಷ್ಣ ಅವರು ಮಾತನಾಡಿ ಗುರುಮಠಕಲ್ ಪಟ್ಟಣದಲ್ಲಿ ಭವ್ಯ ಸ್ವಾಗತ ನೀಡಿದ್ದೀರಿ. ಈ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಖರ್ಗೆ ಸಾಹೇಬರು ಈ ಕ್ಷೇತ್ರದಿಂದ ವಿಧಾನಸಭೆಗೆ ಸತತ ಎಂಟು ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಜಗನ್ನಾಥ್ ರಾವ್ ಚಂಡ್ರಕಿ ಹಾಗೂ ಕೋಯಿಲೂರು ಮಲ್ಲಪ್ಪ ಅವರಂತವರು ಇಲ್ಲಿ ಸಂಸದರಾಗಿ ಆಯ್ಕೆಯಾಗಿ ಹೋಗಿದ್ದಾರೆ. ಈ ಸಲ ನನಗೆ ಅವಕಾಶ ಸಿಕ್ಕಿದೆ. ಹಾಗಾಗಿ ಅತ್ಯಂತ ಹೆಚ್ಚಿನ ಲೀಡ್ ತಂದು ಗೆಲ್ಲಿಸಿ ಎಂದರು.
ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ ರಾಧಾಕೃಷ್ಣ ಅವರು ಕಳೆದ ಮೂರು ದಶಕಗಳಿಂದ ಈ ಭಾಗದ ಜನರೊಂದಿಗೆ ಒಡನಾಟವಿಟ್ಟುಕೊಂಡಿದ್ದಾರೆ. ಗುರುಮಠಕಲ್ ನಲ್ಲಿ ಬಿಜೆಪಿ ಪಕ್ಷ ಇಲ್ಲ. ಇಲ್ಲಿ ಮುಖಂಡರೇ ಇಲ್ಲ. ರಾಧಾಕೃಷ್ಣಅವರನ್ನು ಗೆಲ್ಲಿಸಿ ಆ ಮೂಲಕ ಅಭಿವೃದ್ದಿ ಮಾಡಲು ಆಶೀರ್ವದಿಸಿ ಎಂದು ಮನವಿ ಮಾಡಿದರು.