ಮೈಸೂರು: ಸಂಸದೆ ಸುಮಲತಾ ಅಂಬರೀಶ್ ಅವರು ಏನು ನಮಗೆ ಶಾಶ್ವತ ಶತ್ರುವಲ್ಲ. ಚುನಾವಣಾ ಅಗತ್ಯಬಿದ್ದರೇ ಅವರನ್ನು ಭೇಟಿ ಮಾಡುತ್ತೇವೆ ಎಂದು ಮಂಡ್ಯ ಲೋಕಸಭಾ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಮಣ್ಣಿನಲ್ಲಿ ರಾಮಾಂಜನೇಯ ಯುದ್ಧವೇ ನಡೆದು ಹೋಗಿದೆ. ನಾವೆಲ್ಲ ಅದರ ಮುಂದೆ ಹುಲು ಮಾನವರು. ರಾಜಕೀಯ ಹೋರಾಟದಲ್ಲಿ ಜಗಳ ಇದ್ದೇ ಇರುತ್ತದೆ. ಅಂಬರೀಶ್ ಇದ್ದಾಗ ನಾವು ಪರಸ್ಪರ ಜೊತೆಯಾಗಿದ್ದೇವು. ನಮಗೆ ಸುಮಲತಾ ಅವರು ಶಾಶ್ವತ ಶತ್ರುವಲ್ಲ. ಅಗತ್ಯಬಿದ್ದರೇ ನಾವು ಭೇಟಿಯಾಗುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಡಿಎಂಕೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಯಾಗದಂತೆ ತಡೆಯುತ್ತೇವೆ ಎಂದು ಹೇಳಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ನೀರಾವರಿಗೆ ಎಚ್.ಡಿ ದೇವೇಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂತಹ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನವರಿಗಿಲ್ಲ ಎಂದು ಎಚ್‌ಡಿಕೆ ಕಿಡಿಕಾರಿದರು.





