ಬೆಂಗಳೂರು: ಶಾಸಕ ಎಚ್.ಡಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ವರದಿ ನೀಡಲು ನಾನು ಎಸ್‌ಐಟಿ ವಕ್ತಾರನಲ್ಲ ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಗರಂ ಆಗಿದ್ದಾರೆ.
ಎಚ್‌ಡಿ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ಎಚ್ ಡಿ ರೇವಣ್ಣ ವಿರುದ್ಧ ದೂರು ದಾಖಲಾದ ಬಳಿಕವೇ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್‌ಐಟಿ ತಂಡ ರೇವಣ್ಣ ಅವರನ್ನು ಮ್ಯಾಜಿಸ್ಟ್ರೇಟರ್ ಮುಂದೆ ನಿಲ್ಲಿಸುತ್ತಾರೆ ಮತ್ತು ಮುಂದೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಅದು ಎಸ್‌ಐಟಿ ಅವರ ಕೆಲಸವಾಗಿದ್ದು, ಅದರ ಬಗ್ಗೆ ಪ್ರತಿನಿತ್ಯ ವರದಿ ನೀಡಲು ನಾನು ವಕ್ತಾರನಲ್ಲ ಎಂದು ಕಿಡಿಕಾರಿದ್ದಾರೆ.
ಎಸ್‌ಐಟಿ ತಂಡ ಕಾನೂನಾತ್ಮಕವಾಗಿ ತನ್ನ ಕೆಲಸವನ್ನು ಮಾಡುವ ಮೂಲಕ ರೇವಣ್ಣ ಅವರನ್ನು ಬಂಧಿಸಿದೆ. ಇದು ಜೆಡಿಎಸ್ ನವರಿಗೆ ಸಹಜವಾಗಿಯೇ ನೋವುಂಟು ಮಾಡುತ್ತದೆ. ಎಸ್‌ಐಟಿ ನಿಯಮಾನುಸಾರ ಕೆಲಸ ಮಾಡದಿದ್ದರೇ ಮುಂದೊಂದು ದಿನ ಎಸ್‌ಐಟಿ ಮೇಲೂ ಆರೋಪ ಮಾಡಬಹುದು ಹಾಗಾಗಿ ಎಸ್‌ಐಟಿ ತನ್ನ ಕೆಲಸ ಮಾಡಿದೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ಪ್ರಜ್ವಲ್ ರೇವಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರ ವಿರುದ್ಧ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದೇವೆ. ಇಂಟರ್ ಪೋಲ್ ನವರು ಎಲ್ಲಾ ದೇಶಗಳೊಂದಿಗೂ ಕಮ್ಯುನಿಕೇಟ್ ಮಾಡುತ್ತಿದ್ದಾರೆ. ಆಮೂಲಕ ಪ್ರಜ್ವಲ್ ಲೊಕೇಷನ್ ಕಂಡು ಹಿಡಿಯುತ್ತಿದ್ದಾರೆ. ಆ ನಂತರ ಪ್ರಜ್ವಲ್ ರನ್ನು ಹೇಗೆ ಸುರಕ್ಷಿತವಾಗಿ ಬಂಧಿಸಿ ಭಾರತಕ್ಕೆ ವಾಪಾಸ್ ಕರೆತರಬೇಕು ಎಂಬ ಬಗ್ಗೆ ಎಸ್‌ಐಟಿ ನಿರ್ಧರಿಸಲಿದೆ ಎಂದು ವಿವರಿಸಿದರು.