ಗದಗ: ನಾನು ಇನ್ನು ಮುಂದೆ ಸುಮ್ಮನೆ ಇರಲ್ಲ. ಅಪಮಾನ ಮಾಡಿದರೆ ಬೀದಿಗಿಳಿದು ಮಾತನಾಡುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ನಾಯಕರ ಭೇಟಿ ವಿಚಾರವಾಗಿ ಗದಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಅಪಾಯಿಟ್ಮೆಂಟ್ ಕೇಳಿ ಹೋಗಬೇಕು ಅಂತೇನು ಇಲ್ಲ. ಅವಕಾಶ ಸಿಕ್ಕಾಗಲೆಲ್ಲಾ ದೆಹಲಿಗೆ ಹೋಗಿ ಬರುತ್ತೇನೆ. ಇದರಲ್ಲಿ ಯಾರ ಅಪ್ಪಣೆಯೂ ಬೇಕಿಲ್ಲ. ಎಲ್ಲಾ ವಿಚಾರವನ್ನು ವರಿಷ್ಠರ ಬಳಿ ಹೇಳಿ ಬರುತ್ತೇನೆ. ರಾಮುಲು ಸುಮ್ಮನೆ ಇದ್ರು ಎಂದು ಹೇಳುತ್ತಿದ್ದರು. ಇನ್ನು ಮುಂದೆ ಸುಮ್ಮನೆ ಇರುವುದಿಲ್ಲ. ಇನ್ನು ಮುಂದೆ ನಾನು ಮಾತನಾಡುತ್ತೇನೆ. ಯಾರ ಮುಲಾಜು ಇಲ್ಲದೇ ಮಾತನಾಡುತ್ತೇನೆ ಎಂದು ಹೇಳಿದರು.
ಇಲ್ಲಿಯವರೆಗೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂದು ಸುಮ್ಮನೇ ಇದ್ದೆ. ಈ ಬಾರಿ ನಮ್ಮಂತಹವರನ್ನು ಅಪಮಾನ ಮಾಡಿದರೆ, ಬೀದಿಗೆ ಇಳಿದು ಮಾತನಾಡುತ್ತೇನೆ. ರಾಮುಲು ಯಾವತ್ತೂ ಪಕ್ಷ ಬಿಟ್ಟು ಹೋಗಲ್ಲ. ಇದು ರಾಜ್ಯದ ಜನರಿಗೂ ಗೊತ್ತಿದೆ. ನಾನು ಹೋಗಬೇಕೆಂದರೆ, ನನ್ನನ್ನು ಯಾರೂ ತಡೆಯೋಕೆ ಆಗಲ್ಲ. ಈಗಿನ ಕಾಲದಲ್ಲಿ ಯಾರು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಕಿಡಿಕಾರಿದರು.





