Mysore
20
overcast clouds
Light
Dark

ಮೈತ್ರಿ ಮರುಪರಿಶೀಲಿಸಲು ದೇವೇಗೌಡರಿಗೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ: ಸಿ.ಎಂ. ಇಬ್ರಾಹಿಂ

ಬೆಂಗಳೂರು : ಬಿಜೆಪಿ ಜತೆಗಿನ ಮೈತ್ರಿ ಸಂಬಂಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಕೈ ಮುಗಿದು ಪ್ರಾರ್ಥಿಸುತ್ತಿದ್ದು, ಅವರು ನಿರ್ಧಾರವನ್ನು ಮರುಪರಿಶೀಲನೆ ಮಾಡಲಿ ಎಂದು ಜೆಡಿಎಸ್ ಬಂಡಾಯ ನಾಯಕ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆಯುವ ಅಧಿಕಾರನೇ ಇಲ್ಲ. ಹಾಗಾಗಿ ಎಲ್ಲವನ್ನೂ ಕಾದುನೋಡುವುದೇ ಒಳಿತು. ಇನ್ನೂ, ದೇವೇಗೌಡರು ಹಿರಿಯರು, ಅವರಿಗೆ ಇನ್ನೊಮ್ಮೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನಿಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ ಎಂದರು.

ರಾಜ್ಯ ಘಟಕ ವಿಸರ್ಜನೆ ಮಾಡುವುದಕ್ಕೆ ಬರಲ್ಲ. ದೇವೇಗೌಡರು ತಪ್ಪು ಮಾಡಿದ್ದಾರೆ ಎಂದು ನೋವು ಆಗಿಲ್ಲ. ಇದನ್ನು ಸರಿಪಡಿಸಿಕೊಂಡು ಹೋಗೋಣ. ಇದಕ್ಕೆ ಒಪ್ಪಿದರೆ ಒಟ್ಟಾಗಿ ಹೋಗಲು ಸಿದ್ಧ. ವಿಜಯದಶಮಿಯಲ್ಲಿ ನನಗೆ ಬೇವು ಬೆಲ್ಲ ಎರಡೂ ಸಿಕ್ಕಿದೆ ಎಂದ ಅವರು, ಇವತ್ತು ರಾಜ್ಯದಲ್ಲಿ ಯಾವ ಸಿದ್ಧಾಂತಕ್ಕೆ ನಿಂತಿದ್ದೇವೋ ಆ ಸಿದ್ಧಾಂತಕ್ಕೆ ದೇವೇಗೌಡರು ನಿಲ್ಲಬೇಕು ಎನ್ನುವುದು ನನ್ನ ಇಚ್ಛೆ ಎಂದು ಹೇಳಿದರು.

ಉದಯಪುರದಲ್ಲಿ ಜೆಡಿಎಸ್ ಕಾರ್ಯಕ್ರಮ ಇದೆ, ಬೇರೆ ಪಕ್ಷದ ನಾಯಕರನ್ನೂ ಭೇಟಿ ಮಾಡುತ್ತೇನೆ. ನಾನು ಒಂದೇ ಕಡೆ ಕೂರಲ್ಲ, ತ್ರಿಲೋಕ ಸಂಚಾರಿ ಎಂದ ಅವರು, ತಾಯಿ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಲಿ. ದುಷ್ಟ ಶಕ್ತಿಗಳ ಸಂಹಾರ ಆಗಲಿ ಎಂದು ಇಬ್ರಾಹಿಂ ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ