ಚಿಕ್ಕಬಳ್ಳಾಪುರ : ಜೇನಿನ ಜೈಲಿನ ಬಲೆಯ ಅನುಭವ ನನಗೆ ಆಗಿಲ್ಲ. ಆದರೆ ನನ್ನ ಹೆಸರಿನವರಿಗೆ ಆಗಿದೆ ಎಂಬ ವದಂತಿಗಳಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ನನಗೆ ಹನಿಟ್ರ್ಯಾಪ್‍ನ ಯಾವುದೇ ಅನುಭವವಾಗಿಲ್ಲ ಎಂದರು.
ಹನಿಟ್ರ್ಯಾಪ್ ಎಂಬುದು ಸಾರ್ವಜನಿಕರ ಜೀವನದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ರಾಜಕೀಯದಲ್ಲೂ ಇದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರು ಇದಕ್ಕೆ ಸಿಲುಕಿ, ಮರ್ಯಾದೆಗೆ ಅಂಜಿ ಆತಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ಬೆಳಕಿಗೆ ಬಂದಿವೆ, ಇನ್ನೂ ಕೆಲವು ಮುಚ್ಚಿ ಹೋಗಿವೆ.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಕೆಲವರು ಹೈಕೋರ್ಟ್‍ಗೆ ಹೋಗಿ ನಿರ್ಬಂಧಕ ಆಜ್ಞೆ ತಂದಿದ್ದರು. ಆಗೆಲ್ಲಾ ಅವರು ಸಿಬಿಐ ತನಿಖೆಗೆ ಒಪ್ಪಿಸುತ್ತಿರಲಿಲ್ಲ. ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ ನಮ್ಮ ಸಚಿವರು ತನಿಖೆ ಮಾಡಿಸುವ ಭರವಸೆ ನೀಡಿದ್ದರು. ಆದರೆ ಬಿಜೆಪಿಯವರು ಮುಖ್ಯಮಂತ್ರಿಯವರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಎಷ್ಟು ಸಾಲ ಮಾಡಿದೆ. ಅಲ್ಲಿನ ಆರ್ಥಿಕ ಸ್ಥಿತಿ ಏನು ಎಂಬೆಲ್ಲಾ ವಿಚಾರಗಳ ಬಗ್ಗೆ ವಿವರಣೆ ನೀಡುತ್ತಿದ್ದರು. ಅದು ಸಾರ್ವಜನಿಕರಿಗೆ ತಿಳಿಯಬಾರದು ಎಂಬ ಕಾರಣಕ್ಕಾಗಿ ಬಿಜೆಪಿಯವರು ವಿಧಾನಮಂಡಲದಲ್ಲಿ ಗದ್ದಲ ಎಬ್ಬಿಸಿ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.





