ದಾವಣಗೆರೆ : ನಾನೇನೂ ಕಾಂಗ್ರೆಸ್ ಸೇರಲು ಅರ್ಜಿ ಹಾಕಿಲ್ಲ. ತಾಲೂಕಿನಲ್ಲಿ ಬರವಿದೆ, ಎಷ್ಟು ಬಾರಿ ಪ್ರವಾಸ ನಡೆಸಿದ್ದೀರಾ? ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದೀರಾ? ಎಂದು ಹೊನ್ನಾಳಿ ಶಾಸಕ ಶಾಂತನಗೌಡರಿಗೆ ಮಾಜಿ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಸಿಎಂ ಭೇಟಿ ಮಾಡಲು ನಿಮ್ಮ ಅಪ್ಪಣೆ ಬೇಕಿಲ್ಲ, ಶಾಸಕರಾಗಿ ಇದುವರೆಗೂ ನೀವು ತಂದಿರುವುದು 50 ಲಕ್ಷ ರೂಪಾಯಿ ಅನುದಾನ ಮಾತ್ರ. ಈಗ ನಡೆಯುತ್ತಿರೋದು ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವಧಿಯಲ್ಲಿ ಮಂಜೂರು ಮಾಡಿದ ಕಾಮಗಾರಿಗಳು ಎಂದರು.
ನಾನು ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ಅನುದಾನ ತಂದಿದ್ದೆ. ನೀವು ಎಷ್ಟು ತಂದಿದ್ದೀರಿ? ಶಾಸಕರಾಗಿ 6 ತಿಂಗಳು ಕಳೆದಿದೆ. ಎಷ್ಟು ಅನುದಾನ ತಂದಿದ್ದೀರಿ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಸೇರುತ್ತೇನೆ ಎಂದು ಅರ್ಜಿ ಹಿಡಿದುಕೊಂಡು ನಿಮ್ಮ ಮನೆಬಾಗಿಲಿಗೆ ಬಂದಿಲ್ಲ. ನಾನು ಅಭಿವೃದ್ಧಿ ಮತ್ತು ಬರಗಾಲದ ವಿಚಾರದಲ್ಲಿ ರಾಜಕಾರಣ ಮಾಡಲ್ಲ ಎಂದು ಹೇಳಿದ್ದಾರೆ.
ನಾನು ಮೂರು ಬಾರಿ ಶಾಸಕನಾಗಿ ಗೆದ್ದು, ಸಚಿವನಾಗಿ ಆಡಳಿತ ನಡೆಸಿದ ಅನುಭವವಿದೆ. ಯಡಿಯೂರಪ್ಪನವರು ನಬಾರ್ಡ್ ಯೋಜನೆಯಡಿ 510 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಪದೇ ಪದೇ ಹಗುರವಾಗಿ ಟೀಕೆ ಮಾಡಿದರೆ ಅದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.