ಬೆಂಗಳೂರು: ಖಾಸಗಿ ಕೆಲಸಗಳಿಗಾಗಿ ನಾನು ದೆಹಲಿ ಪ್ರವಾಸ ಮಾಡಿದ್ದು, ಯಾವುದೇ ರಾಜಕೀಯದ ಕಾರ್ಯಕ್ರಮ ಇಟ್ಟುಕೊಂಡಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಹೊಸ ಕಚೇರಿ ನೋಡಲು ಹೋಗಿದ್ದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದೇನೆ. ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿ ಮಾಡಿಲ್ಲ. ರಾಜಕೀಯದ ಅಜೆಂಡಾ ಇಟ್ಟುಕೊಂಡು ದೆಹಲಿಗೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ರಾಜಕೀಯ ವಿಚಾರದ ಬಗ್ಗೆ ಯಾವುದನ್ನೂ ಅವರೊಂದಿಗೆ ಮಾತನಾಡಿಲ್ಲ. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಜನ ಸಮುದಾಯಕ್ಕೆ ಗೊತ್ತಾಗುವಂತಹ ವಿಚಾರಗಳೇ ರಾಜಕೀಯ. ಮುಚ್ಚಿಡುವಂತಹ ವಿಚಾರಗಳು ಏನೂ ಇಲ್ಲ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಒಂದು ವೇಳೆ ಅಜೆಂಡಾ ಇಟ್ಟುಕೊಂಡು ದೆಹಲಿಗೆ ಹೋಗಿದ್ದರೆ, ಆ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಇರಬಹುದು ಅಥವಾ ಸಿಎಂ ವಿಚಾರ ಇರಬಹುದು ಯಾವುದನ್ನೂ ಎಲ್ಲಿಯೂ ಮಾತನಾಡಿಲ್ಲ. ಇದು ನಿಮ್ಮ ಗಮನಕ್ಕೆ ಇರಲಿ ಎಂದು ಸ್ಪಷ್ಟನೆ ನೀಡಿದರು.





