ವಿಜಯಪುರ: ಉಚ್ಛಾಟನೆ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರುತ್ತಲೇ ಬರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಉಚ್ಛಾಟನೆಯನ್ನೇ ಸವಾಲಾಗಿ ಸ್ವೀಕರಿಸಿರುವ ಶಾಸಕ ಯತ್ನಾಳ್ ಅವರು, ಹೊಸ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಗುಡುಗಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ. ಆದ್ದರಿಂದ ಹಿಂದೂಗಳ ರಕ್ಷಣೆಗೆ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದಾರೆ.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಒಬ್ಬ ಮಹಾಭ್ರಷ್ಟ. ವಿಜಯೇಂದ್ರ ಮೇಲೆ ಸಾಕಷ್ಟು ಕೇಸ್‌ಗಳಿವೆ. ಇವರಿಂದ ಹಿಂದೂಗಳ ರಕ್ಷಣೆ ಆಗಲ್ಲ ಎಂದು ಕಿಡಿಕಾರಿದರು.
ಇನ್ನು ಜನರ ಅಭಿಪ್ರಾಯ ಸಂಗ್ರಹಿಸಿ ವಿಜಯದಶಮಿ ವೇಳೆಗೆ ಹೊಸ ಪಕ್ಷ ಕಟ್ಟುತ್ತೇನೆ. ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಒತ್ತಾಯಿಸಿದ್ದಾರೆ. ವಿಜಯದಶಮಿ ವೇಳೆಗೆ ಹೊಸ ಪಕ್ಷದ ರಚನೆ ಮಾಡುತ್ತೇವೆ ಎಂದು ಯಡಿಯೂರಪ್ಪ ಕುಟುಂಬಕ್ಕೆ ಎಚ್ಚರಿಕೆ ನೀಡಿದರು.





