ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋಲನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ಹೆಸರೂ ಸಹ ಈ ಕುರಿತಾಗಿ ಕೇಳಿಬರುತ್ತಿದ್ದು, ಸದ್ಯ ಸ್ವತಃ ನಿಖಿಲ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಾನು ಯೂಟರ್ನ್ ಹೊಡೆಯುವ ಗಿರಾಕಿಯಲ್ಲ. ನನ್ನ ಉದ್ದೇಶದ ಬಗ್ಗೆ ನನಗೆ ಸ್ಪಷ್ಟನೆ ಇದೆ. ವರ್ಷದ ಹಿಂದೆ ಈ ಕುರಿತು ಕೇಳಿದ್ದಾಗಲೂ ಸಹ ನಾನು ಇದೇ ಮಾತನ್ನು ಹೇಳಿದ್ದೆ. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು ( ಫೆಬ್ರವರಿ 11 ) ಮಾತನಾಡಿದ ಅವರು ಕಳೆದ ಕೆಲ ದಿನಗಳಿಂದ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿಕೂಟದಿಂದ ನಾನು ನಿಲ್ಲುತ್ತಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವಲ್ಲ, ಕಳೆದ 25 ದಿನಗಳಿಂದ ಹಳೆ ಮೈಸೂರು ಭಾಗದ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ತಾಲೂಕುಗಳ ಮುಖಂಡರು, ಅಭ್ಯರ್ಥಿಗಳ ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ವರಿಷ್ಠರ ಗಮನಕ್ಕೆ ತರುವ ಜವಾಬ್ದಾರಿಯನ್ನು ಪಕ್ಷ ನನಗೆ ವಹಿಸಿದೆ. ಈ ನಿಟ್ಟಿನಲ್ಲಿ ಮಂಡ್ಯದ ಹಲವು ತಾಲೂಕುಗಳಿಗೆ ಹೋಗಿ ಕೆಲಸ ಆರಂಭಿಸಿದ್ದೇನೆ ಎಂದರು.
2019ರ ಲೋಕಸಭೆ ಚುನಾವಣೆಯಲ್ಲಿ ನಾನು ಸೋತಿದ್ದೆ. ಈ ಬಾರಿ ಚುನಾವಣೆ ಪ್ರಕ್ರಿಯೆಯಲ್ಲಿ ನೀವು ಬಂದು ಸಕ್ರಿಯರಾಗಿ ಭಾಗವಹಿಸಬೇಕೆಂದು ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಅವರ ಮಾತಿಗೆ ಬೆಲೆ ಕೊಟ್ಟು ಮಂಡ್ಯ ಮಾತ್ರವಲ್ಲದೇ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಪ್ರಚಾರ ನಡೆಸುವ ಹಾಗೂ ಜನರ ಪ್ರೀತಿ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನಿಖಿಲ್ ಹೇಳಿಕೊಂಡರು.




