ಬೆಂಗಳೂರು: ಜನವರಿ.17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಗೂಂಡಾವರ್ತನೆ ತೋರಿದ್ದಾರೆ. ಭೀತಿಯ ವಾತಾವರಣವನ್ನು ಬಳ್ಳಾರಿಯಲ್ಲಿ ಸೃಷ್ಟಿಸಲಾಗಿದೆ. ಅವರ ಅಂಗರಕ್ಷಕರೇ ಅವರ ಕಾರ್ಯಕರ್ತನನ್ನು ಕೊಂದು ಹಾಕಿದ್ದಾರೆ. ಸುಳಿವು ಬಿಟ್ಟುಕೊಡದಿರಲು ರಾಜಶೇಖರ್ ಶವ ಸುಡಲಾಗಿದೆ. ಜನವರಿ.17ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಬಳ್ಳಾರಿಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನಾರ್ಧನ ರೆಡ್ಡಿ ಅವರು ಪಾದಯಾತ್ರೆಗೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಪಾದಯಾತ್ರೆ ಬಗ್ಗೆ ನಿರ್ಧಾರ ತಗೊಳ್ಳುತ್ತೇವೆ. ಪಾದಯಾತ್ರೆ ಮಾಡಬಾರದು ಅಂತಾ ಏನೂ ಇಲ್ಲ. ನಮಗೂ ಪಾದಯಾತ್ರೆ ಮಾಡುವ ಅಪೇಕ್ಷೆ ಇದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.





