ಹುಬ್ಬಳ್ಳಿ : ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿದ್ದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಬಿಹಾರ ಮೂಲದ ರಿತೇಶ್ ಕುಮಾರ್ ಮೃತ ಆರೋಪಿ.
ಹುಬ್ಬಳ್ಳಿಯ ವಿಜಯನಗರದಲ್ಲಿನ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಆರೋಪಿ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅರೋಪಿ ಅಲ್ಲಿನ ಶೆಡ್‌ವೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ರಿತೇಶ್ ಕುಮಾರ್‌ನನ್ನು ವಶಕ್ಕೆ ಪಡೆದ ಪೊಲೀಸರು ಆತ ವಾಸಿಸುವ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಮಾಡುವ ವೇಳೆ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ಸಹ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಮತ್ತೊಂದು ಗುಂಡು ಹಾರಿಸಿದಾಗ ಆರೋಪಿ ಬೆನ್ನಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದಾಗ ವೈದ್ಯರು ಮೃತ ಪಟ್ಟಿರುವುದಾಗಿ ಹೇಳಿದರು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.