ಬೆಂಗಳೂರು: ಭಾರಿ ವಿವಾದ ಹುಟ್ಟಿಸಿದ್ದ ಕೋಗಿಲು ಲೇಔಟ್‍ನ ಮನೆ ನೆಲಸಮ ಪ್ರಕರಣದಲ್ಲಿ 37 ಕುಟುಂಬಗಳು ಮಾತ್ರ ಸ್ಥಳೀಯರು ಎಂದು ಅಧಿಕಾರಿಗಳ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈಗಾಗಲೇ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿ ಸೇರಿ ಐದು ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಅವುಗಳ ನೈಜತೆಯನ್ನು ಜಿಬಿಎ, ಕಂದಾಯ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.
ಸುಮಾರು 119 ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು 118 ಕುಟುಂಬಗಳಿಗೆ ಆಧಾರ್ ಕಾರ್ಡ್ ಇದೆ. 102 ಕುಟುಂಬಗಳಿಗೆ ವೋಟರ್ ಕಾರ್ಡ್ ಇದ್ದರೆ 77 ಕುಟುಂಬಗಳಿಗೆ ರೇಷನ್ ಕಾರ್ಡ್ ಇದೆ. 63 ಕುಟುಂಬಗಳಿಗೆ ಆದಾಯ ಪ್ರಮಾಣ ಪತ್ರ, 56 ಕುಟುಂಬಗಳಿಗೆ ಜಾತಿ ಪ್ರಮಾಣಪತ್ರ ನೀಡಲಾಗಿದೆ.
ಸೂಕವಾಗಿ ಪರಿಶೀಲಿಸಿ 37 ಕುಟುಂಬಗಳು ಮೂಲ ಬೆಂಗಳೂರಿನವರು ಎಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಆರಂಭದಲ್ಲಿ 37 ಕುಟುಂಬಗಳಿಗೆ ಮಾತ್ರ ವಸತಿ ಸೌಲಭ್ಯ ಸಿಗುವ ಸಾಧ್ಯತೆಯಿದೆ.
ಇಲ್ಲಿಯೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇರುವ ಕುಟುಂಬಗಳನ್ನ ಪರಿಶೀಲಿಸಿ ಮನೆ ಕೊಡಬೇಕೇ ಬೇಡವೇ ಎಂಬ ನಿರ್ಧಾರ ಆಗಲಿದೆ.
ಮನೆ ನೀಡುವಂತೆ ಕೋರಿ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಮನೆ ಕಳೆದುಕೊಂಡವರ ದಾಖಲೆಗಳ ಪರಿಶೀಲನೆ ಬಳಿಕ ಅವರಲ್ಲಿ ಅರ್ಹರಿದ್ದರೆ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ವಸತಿ ಮನೆ ನೀಡುವ ಸಾಧ್ಯತೆ ಇದೆ.





