ವಿಜಯಪುರ: ಹನಿಟ್ರ್ಯಾಪ್ ಬಹಳ ಹೀನ ಕೆಲಸ ಎಂದು ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಚರ್ಚೆಯಲ್ಲಿರುವ ಹನಿಟ್ರ್ಯಾಪ್ ಪ್ರಕರಣ ಕುರಿತು ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ಹನಿಟ್ರ್ಯಾಪ್ ಎನ್ನುವಂತಹದ್ದು ಬಹಳ ಹೀನಾಯವಾದ ಕೆಲಸ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ವಿಚಾರದಲ್ಲಿ ಏನಾಗಿದೆ ಎಂಬುದು ಗೊತ್ತಿಲ್ಲ. ಅವರು ಸಿಎಂ ಹಾಗೂ ಗೃಹಮಂತ್ರಿಗಳಿಗೆ ಏನಾಗಿದೆ ಎನ್ನುವುದನ್ನು ಕೂಲಂಕುಷವಾಗಿ ಹೇಳಿದ್ದಾರೆ. ಹೀಗಾಗಿ ಇದನ್ನು ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಎಂದು ಸಂಪೂರ್ಣ ತನಿಖೆಯಾಗಬೇಕು. ತನಿಖೆ ಬಳಿಕವೇ ಸತ್ಯಾಸತ್ಯತೆ ಏನೆಂದು ತಿಳಿಯಲಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಮ್ಮಲ್ಲಿ ಸಿಎಂ ಹುದ್ದೆ ಖಾಲಿಯಿಲ್ಲ. ನಾನು ಎಲ್ಲೂ ಕೂಡ ಸಿಎಂ ಆಕಾಂಕ್ಷಿ ಎಂದು ಘೋಷಣೆ ಮಾಡಿಲ್ಲ. ಲಿಂಗಾಯತರಿಗೆ ಅಧಿಕಾರ ಸಿಕ್ಕಿಲ್ಲ ಎಂದಿದ್ದೇನೆ ಅಷ್ಟೇ ಎಂದು ಪರೋಕ್ಷವಾಗಿ ಲಿಂಗಾಯತರು ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





