ತುಮಕೂರು: ಲಿಂಗೈಕ್ಯರಾದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಶಿವಕುಮಾರ ಶ್ರೀಗಳ ಸಮಾಜ ಸೇವೆಯನ್ನು ಸ್ಮರಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಆಚರಿಸಲು ಉದ್ದೇಶಿಸಿರುವ ದಾದೋಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಅಲ್ಲದೇ ವೀರಾಪುರದಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಇದೇ ವೇಳೆ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ತ್ಯಾಗದ ಬಗ್ಗೆ ಮಾತನಾಡಿರೋದು ಯಾವ ಅರ್ಥದಲ್ಲಿ ಅನ್ನೋದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದಿಂದಲೂ ತ್ಯಾಗ ಮಾಡುತ್ತಾ ಬಂದಿದೆ. ಆದರೆ ಈಗಿನ ಆಧುನಿಕ ಸಮಾಜಕ್ಕೆ ತ್ಯಾಗದ ಮನೋಭಾವ ಕಡಿಮೆಯಾಗಿದೆ ಎಂಬ ಅರ್ಥದಲ್ಲಿ ಹೇಳಿರಬಹುದು. ಅದರಂತೆ ಸ್ವಾಭಾವಿಕವಾಗಿ ಕಾಂಗ್ರೆಸ್‌ನಲ್ಲೂ ತ್ಯಾಗದ ಮನೋಭಾವ ಕಡಿಮೆ ಆಗಿದೆ ಎಂದು ಹೇಳಿರಬಹುದು ಎಂದರು.





