Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ವೃದ್ಧ ತಾಯಿಯ ಜೀವನ ನಿರ್ವಹಣೆಗೆ ವಾರ್ಷಿಕ 14 ಲಕ್ಷ ಪಾವತಿಸಲು ಹೈಕೋರ್ಟ್‌ ಆದೇಶ

ಕೊಡಗಿನ ವಿರಾಜಪೇಟೆ ಮೂಲದ 85 ವರ್ಷದ ವೃದ್ಧೆ ಅಪ್ಪರಂಡ ಶಾಂತಿ ಬೋಪಣ್ಣ ಎಂಬುವವರ ಜೀವನ ನಿರ್ವಹಣೆಗೆ ಮಗ ಹಾಗೂ ಮೊಮ್ಮಗಳು ವಾರ್ಷಿಕ ತಲಾ 7 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ಈ ವಿಷಯವಾಗಿ ವೃದ್ಧೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ.

ಏನಿದು ಪ್ರಕರಣ?

ವೃದ್ಧೆ ಅಪ್ಪರಂಡ ಶಾಂತಿ ಬೋಪಣ್ಣ ಅವರು ವಿರಾಜಪೇಟೆಯಲ್ಲಿ ತಾವು ಹೊಂದಿದ್ದ 22 ಎಕರೆ ಕಾಫಿ ಎಸ್ಟೇಟ್‌ ಅನ್ನು 2016ರಲ್ಲಿ ಪುತ್ರ ಹಾಗೂ ಮೊಮ್ಮಗಳಿಗೆ ʼಗಿಫ್ಟ್‌ ಡೀಡ್‌ʼ ಅಡಿಯಲ್ಲಿ ಉಡುಗೊರೆಯನ್ನಾಗಿ ನೀಡಿದ್ದರು. ಈ ಸಂದರ್ಭದಲ್ಲಿ ಪುತ್ರ ಹಾಗೂ ಮೊಮ್ಮಗಳು ಅಪ್ಪರಂಡ ಶಾಂತಿ ಬೋಪಣ್ಣ ಅವರ ಜೀವನ ನಿರ್ವಹಣೆಗೆ ವಾರ್ಷಿಕವಾಗಿ ತಲಾ 7 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ 2016ರಿಂದ 2019ರವರೆಗೆ ಇಬ್ಬರೂ ಸಹ ಹಣವನ್ನು ನೀಡಿದ್ದರು.

ಬಳಿಕ ಪುತ್ರ ಹಾಗೂ ಮೊಮ್ಮಗಳು ಯಾವುದೇ ಹಣ ನೀಡಿರಲಿಲ್ಲ. ಅಲ್ಲದೇ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವ ವಿಷಯ ತಿಳಿದ ಅಪ್ಪರಂಡ ಶಾಂತಿ ಬೋಪಣ್ಣ 2019ರಲ್ಲಿ ಗಿಫ್ಟ್‌ ಡೀಡ್‌ ರದ್ದುಪಡಿಸುವಂತೆ ʼಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಾಯ್ದೆ 2007ʼರ ಅಡಿಯಲ್ಲಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಯ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ 2021ರ ಸೆಪ್ಟೆಂಬರ್‌ 15ರಂದು ಗಿಫ್ಟ್‌ ಡೀಡ್‌ ಅನ್ನು ರದ್ದುಮಾಡಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಪುತ್ರ ಹಾಗೂ ಮೊಮ್ಮಗಳು ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. 2023ರ ಮಾರ್ಚ್‌ 23ರಂದು ಉಪವಿಭಾಗಾಧಿಕಾರಿಯ ಆದೇಶವನ್ನು ರದ್ದುಗೊಳಿಸಿದ ಜಿಲ್ಲಾಧಿಕಾರಿ ಪುತ್ರ ಹಾಗೂ ಮೊಮ್ಮಗಳ ಆಸ್ತಿ ಹಕ್ಕನ್ನು ಮರುಸ್ಥಾಪಿಸುವಂತೆ ಆದೇಶ ಹೊರಡಿಸಿದ್ದರು. ಹಾಗೆಯೇ ವೃದ್ಧತಾಯಿಯ ಜೀವನಾಂಶವನ್ನು ಜೀವಿತಾವಧಿವರೆಗೆ ಪಾವತಿಸುವಂತೆ ಪುತ್ರ ಹಾಗೂ ಮೊಮ್ಮಗಳಿಗೆ ನಿರ್ದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿದ್ದ ವೃದ್ಧೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!