ಬೆಂಗಳೂರು: ಮಹತ್ವದ ಬೆಳವಣೆಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ಭೇಟಿ ನೀಡುತ್ತಿದ್ದು, ರಾಜಕೀಯವಾಗಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಭಾರೀ ಪ್ರಮಾಣದ ಆಂತರಿಕ ಜಿದ್ದಾಜಿದ್ದಿ ನಡೆಯುತ್ತಿದೆ. ಜೊತೆಗೆ ವಿಧಾನಪರಿಷತ್ ಸದಸ್ಯರ ನೇಮಕಾತಿ ಕುರಿತಂತೆಯೂ ಹೈಕಮಾಂಡ್ ಜೊತೆಗೆ ಚರ್ಚಿಸಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಡಿ.ಕೆ..ಶಿವಕುಮಾರ್ ದೆಹಲಿಯಲ್ಲಿದ್ದು, ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕೂಡ ದೆಹಲಿಗೆ ಭೇಟಿ ನೀಡುತ್ತಿದ್ದು, ರಾಜ್ಯ ರಾಜಕೀಯ ಜಿದ್ದಾಜಿದ್ದಿ ದೆಹಲಿಯ ಅಂಗಳದಲ್ಲಿ ಇತ್ಯರ್ಥವಾಗಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ರಾಜ್ಯದಲ್ಲಿ ಸಂಪುಟ ಪುನಃರಚನೆ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಸ್ವತಃ ಡಿಕೆಶಿ ಸುಳಿವನ್ನೂ ನೀಡಿದ್ದಾರೆ. ಕೆಲವು ಸಚಿವರು ತ್ಯಾಗ ಮಾಡಬೇಕಾದ ಸಂದರ್ಭ ಬರಬಹುದು ಎಂಬ ಅರ್ಥದಲ್ಲೂ ಹೇಳಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಭೇಟಿಯ ಸಂದರ್ಭದಲ್ಲಿ ವರಿಷ್ಠರಿಗೆ ಈ ವಿಚಾರವನ್ನು ಗಮನಕ್ಕೆ ತರುವ ಸಾಧ್ಯತೆ ಇದೆ.




