ಬೆಂಗಳೂರು: ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಹೇಮಾವತಿ ಕೆನಾಲ್ ವಿಚಾರದಲ್ಲಿ ಶಾಸಕ ರಂಗನಾಥ್ ಬೆದರಿಕೆ ಹಾಕುತ್ತಿದ್ದಾರೆ ಎಂಬ ಹೇಳಿಕೆಗೆ ರಂಗನಾಥ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.24) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಣಿಗಲ್‌ನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ನಮ್ಮ ಕ್ಷೇತ್ರಕ್ಕೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಆದರೆ ರಾಜೇಂದ್ರ ರಾಜಣ್ಣ ಅವರು ನಾನು ಫೋನ್ ಮಾಡಿ ಬೆದರಿಕೆ ಹಾಕುತ್ತೇನೆಂದು ಹೇಳುತ್ತಾರೆ. ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ? ನಾನೊಬ್ಬ ಸಾಮಾನ್ಯ ರೈತನ ಮಗ ಎಂದು ಟಾಂಗ್ ನೀಡಿದ್ದಾರೆ.
ನಾನು ಫೋನ್‌ನಲ್ಲಿ ಮಾತನಾಡಿದರೆ ಅದು ಬೆದರಿಕೆ ಹೇಗೆ ಆಗುತ್ತದೆ? ರಾಜ್ಯದಲ್ಲಿ ನಮ್ಮ ಸರ್ಕಾರವೇ ಬಂದಿದೆ. ಜನ ಪರ ನಾವು ಶಿರಸಾವಹಿಸಿ ಕೆಲಸ ಮಾಡೋಣ ಎಂದಿದ್ದೇನೆ. ನಮ್ಮ ಕ್ಷೇತ್ರದ ಸಹಕಾರ ಸಂಘದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರೇ ಹಲವು ವರ್ಷಗಳಿಂದ ಇದ್ದಾರೆ. ಅದಕ್ಕೆ ನಾನು ಕಾಂಗ್ರೆಸ್ ಬೆಂಬಲಿಗರನ್ನು ತರುವ ಪ್ರಯತ್ನ ಮಾಡುತ್ತೇನೆ. ಹೀಗಾಗಿ ಸಹಕಾರ ಸಂಘದಿಂದ ಸಾಲ ನೀಡಿ ಸದನದಲ್ಲಿ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ರಾಜಣ್ಣ ಅವರೊಂದಿಗೆ ನನಗೆ ವೈಮನಸ್ಸು ಇಲ್ಲ, ತುಂಬಾ ಸಲುಗೆಯಿಂದ ಇದ್ದೇನೆ. ಆದರೆ ನನ್ನ ಮೇಲೆ ಯಾಕೆ ಭಿನ್ನಾಭಿಪ್ರಾಯ ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಬೆದರಿಕೆ ಹಾಕೋ ಗುಣ ಇಲ್ಲ, ಡಿ.ಕೆ.ಶಿವಕುಮಾರ್ ಅವರು ಶಾಸಕರಾಗಿ ಹೇಗೆ ನಡೆದುಕೊಳ್ಳಬೇಕೆಂದು ಹೇಳಿ ಕೊಟ್ಟಿದ್ದಾರೆ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.





