ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಚಳಿಗಾಲ ಮುಗಿದು ಬೇಸಿಗೆಗಾಲ ಶುರುವಾಗಿದೆ. ಅತ್ತ ಚಳಿ ಚಳಿ ಎನ್ನುತ್ತಿದ್ದ ಜನರೂ ಕೂಡ ಈಗ ಇಷ್ಟೊಂದು ಸೆಖೆ ಎನ್ನುತ್ತಿದ್ದಾರೆ.
ಕೆಲ ಜಿಲ್ಲೆಗಳಲ್ಲಿ ಮನೆಯಿಂದ ಹೊರಗೆ ಕಾಲಿಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬೆನ್ನಲ್ಲೇ ಹವಾಮಾನ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಫೆಬ್ರವರಿ.24ರವರೆಗೂ ಒಣ ಹವೆ ಮುಂದುವರಿಯಲಿದ್ದು, ಮುಂದಿನ ಐದು ದಿನಗಳಲ್ಲಿ ಈ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.
ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆಯಿದ್ದು, ಅದರಲ್ಲೂ ಮುಂದಿನ 48 ಗಂಟೆಗಳಲ್ಲಿ ಈಗಿರುವ ತಾಪಮಾನಕ್ಕಿಂತ 2 ರಿಂದ 3 ಡಿಗ್ರಿ ಗರಿಷ್ಠ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ರಾಜ್ಯದ ಬಹುತೇಕ ಕಡೆ 34 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ತಲುಪಿದ್ದು, ಕಲಬುರ್ಗಿಯಲ್ಲಿ ಕಳೆದ 24 ಗಂಟೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ವರದಿಯಾಗಿದೆ.





