Mysore
19
overcast clouds
Light
Dark

ಮಲೆನಾಡು ಭಾಗದಲ್ಲಿ ಮತ್ತೆ ಹೆಚ್ಚಾದ ಮಳೆ: ತುಂಗಭದ್ರಾ ಜಲಾಶಯ ತುಂಬುವ ನಿರೀಕ್ಷೆ

ಬಳ್ಳಾರಿ: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್‌ಗೆ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಹೊರಹರಿವು ನಿಯಂತ್ರಣದಲ್ಲಿದೆ.

ಮಲೆನಾಡು ಭಾಗದಲ್ಲಿ ನಿನ್ನೆಯಿಂದ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಜಲಾಶಯಕ್ಕೆ ಒಳಹರಿವು ಸಹ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅನ್ನದಾತರು ಸಂತಸಗೊಂಡಿದ್ದು, ಡ್ಯಾಂ ಮತ್ತೆ ಭರ್ತಿಯಾಗುವ ಮುನ್ಸೂಚನೆ ಕಾಣುತ್ತಿದೆ.

ಚೈನ್‌ ಲಿಂಕ್‌ ಕಟ್‌ ಆಗಿ ಜಾರಿ ಹೋಗಿದ್ದ 19ನೇ ಕ್ರಸ್ಟ್‌ ಗೇಟ್‌ಗೆ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಿ ಗೇಟ್‌ ಮೂಲಕ ನೀರಿನ ಹೊರಹರಿವನ್ನು ಬಂದ್‌ ಮಾಡಲಾಗಿದೆ. ಡ್ಯಾಂನ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಇದೆ. ಸದ್ಯ ಡ್ಯಾಂನಲ್ಲಿ 71.14 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ 87.56 ಅಡಿ ನೀರಿನ ಸಂಗ್ರಹವಿತ್ತು.

ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಪರಿಣಾಮ ಪ್ರತಿ ದಿನ ಮೂರರಿಂದ ನಾಲ್ಕು ಟಿಎಂಸಿ ನೀರು ನದಿಯಲ್ಲಿ ಒಳಹರಿವು ಇದೆ. ಮಾಹಿತಿಗಳ ಪ್ರಕಾರ ಮುಂದಿನ ವಾರದಲ್ಲಿ ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದ್ದು, ನಿಸರ್ಗದ ಕೃಪೆಯಿಂದ ಮುಂದಿನ 10 ದಿನಗಳ ಒಳಗೆ ಡ್ಯಾಂ ತುಂಬುವ ಸಾಧ್ಯತೆಯಿದೆ. ಹಾಗಾಗಿ ಯಾರೂ ಕೂಡ ಆತಂಕ ಪಡಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಈ ಮೂಲಕ ಆ ಭಾಗದ ಅನ್ನದಾತರಿಗೆ ಕೊಂಚ ನೆಮ್ಮದಿ ಸಿಕ್ಕದಂತಾಗಿದ್ದು, ಈ ಬಾರಿಯಾದರೂ ಉತ್ತಮ ಬೆಳೆ ಬೆಳೆಯಬಹುದು ಎಂದು ಅಂದಾಜಿಸಿದ್ದಾರೆ.