Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕಾರವಾರದಲ್ಲಿ ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿತ: ಲಾರಿ ಪಲ್ಟಿ

ಕಾರವಾರ: ಕಾರವಾರದ ಮೂಲಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಬಿದ್ದಿದ್ದು, ಲಾರಿಯೊಂದು ನದಿಗೆ ಬಿದ್ದಿದೆ.

ಕಾರವಾಡ ಗೋವಾ ಸಂಪರ್ಕ ಮಾಡುವ ಕೋಡಿಭಾಗ್‌ ಬಳಿ ಇರುವ ಈ ಸೇತುವೆ ತಡರಾತ್ರಿ ಕುಸಿದು ಬಿದ್ದಿದೆ. ಫಿಲ್ಲರ್‌ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಸೇತುವೆ ತುಂಡಾಗುವ ವೇಳೆಯೇ ಗೋವಾದಿಂದ ಬರುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದೆ.

ತಕ್ಷಣ ಎಚ್ಚೆತ್ತ ಮೀನುಗಾರರು ಹಾಗೂ ಪೊಲೀಸರು ಲಾರಿ ಚಾಲಕ ಕೇರಳ ಮೂಲದ ರಾಧಾಕೃಷಣ ನಾಳಾ ಸ್ವಾಮಿ ಎಂಬುವವರನ್ನು ರಕ್ಷಣೆ ಮಾಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಘಟನೆ ಸಂಭವಿಸುವ ಮುನ್ನವೇ ಬೈಕ್‌ ಹಾಗೂ ಕಾರು ಕೂಡ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದೆ. ಆದರೆ ಅವೆರಡು ವಾಹನಗಳು ಮುಂದೆ ಸಾಗಿದವು ಎನ್ನಲಾಗಿದೆ. ಸದ್ಯ ಟ್ರಕ್‌ ನೀರಿನಲ್ಲಿ ಬಿದ್ದಿದ್ದು, ಮತ್ತೆ ಯಾವುದಾದರೂ ವಾಹನ ಬಿದ್ದಿರಬಹುದು ಎಂದು ಮೀನುಗಾರರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಈ ಸೇತುವೆ ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿತ್ತು. ಆದರೆ ಈಗ ಹೆಚ್ಚಿನ ಮಳೆಯಿಂದಾಗಿ ಇದು ಕುಸಿದು ಬಿದ್ದಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಂಜಾಗ್ರತೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೊಸ ಸೇತುವೆಯ ಮೇಲಿಂದಲೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹಳೆಯ ಸೇತುವೆ ಕುಸಿದಿರುವ ಪರಿಣಾಮ ಹೊಸ ಸೇತುವೆ ಪರಿಶೀಲನೆಗೆ ಆದೇಶ ಹೊರಡಿಸಲಾಗಿದ್ದು, ಸೇತುವೆ ಪರಿಶೀಲನೆ ನಡೆಸಿ ವಾಹನ ಸಂಚಾರಕ್ಕೆ ತಕ್ಷಣವೇ ಅವಕಾಶ ಕಲ್ಪಿಸುವಂತೆ ಆದೇಶ ನೀಡಲಾಗಿದೆ.

Tags: