ಬೆಂಗಳೂರು: ಈ ವರ್ಷ ವಿಪರೀತ ಮಳೆ ಸುರಿಯುತ್ತಿರುವ ಪರಿಣಾಮ ತರಕಾರಿ ಹಾಗೂ ಹೂವುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ತರಕಾರಿಗಳನ್ನು ಕೊಳ್ಳಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. ಬೆಲೆ ಜಾಸ್ತಿಯಾದರೂ ಕೊಂಡುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಈಗ ಮತ್ತೆ ತನ್ನ ಆರ್ಭಟ ಶುರುಮಾಡಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳಿಗೆ ಕೂಡ ಭಾರೀ ಹಾನಿಯಾಗುತ್ತಿದ್ದು, ಮಾರುಕಟ್ಟೆಗೆ ಹೂವು ಹಾಗೂ ತರಕಾರಿಗಳು ಸರಿಯಾಗಿ ಬರುತ್ತಿಲ್ಲ. ಪರಿಣಾಮ ತರಕಾರಿ ಹಾಗೂ ಹೂವುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಹೂವುಗಳಲ್ಲಿ ಸೇವಂತಿಗೆ, ಕಾಕಡ, ಮಲ್ಲಿಗೆ, ಕನಕಾಂಬರ, ಗುಲಾಬಿ ಸೇರಿದಂತೆ ಎಲ್ಲಾ ಹೂವುಗಳ ಬೆಲೆ ದುಪ್ಪಟ್ಟಾಗಿದ್ದು, ಗ್ರಾಹಕರು ತೀವ್ರ ಕಂಗಾಲಾಗಿದ್ದಾರೆ. ಆಷಾಢ ಮಾಸದಲ್ಲಿ ಕೊಳ್ಳಲೇ ಬೇಕಾದ ಅನಿವಾರ್ಯ ಇರುವುದರಿಂದ ಬೆಲೆ ಜಾಸ್ತಿಯಾದರೂ ಹೂವುಗಳನ್ನು ಕೊಂಡುಕೊಂಡು ಹೋಗುತ್ತಿದ್ದಾರೆ.
ಹೂವಿನ ಜೊತೆ ತರಕಾರಿಗಳ ಬೆಲೆಯೂ ಏರಿಕೆಯಾಗಿದ್ದು, ಟೊಮೋಟೋ, ಕ್ಯಾರೆಟ್, ಬಟಾಣಿ, ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ತರಕಾರಿಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಗ್ರಾಹಕರು ತೀವ್ರ ಕಂಗಾಲಾಗಿದ್ದಾರೆ.
ತರಕಾರಿಗಳು ಹಾಗೂ ಹೂವುಗಳ ಬೆಲೆ ಹೆಚ್ಚಾಗಲು ಮಳೆಯೇ ಕಾರಣ ಎನ್ನಲಾಗುತ್ತಿದ್ದು, ಮಾರುಕಟ್ಟೆಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಕೂಡ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.