ಬೆಂಗಳೂರು: ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದ್ದು, ಎಲ್ಲರೂ ಮುಂಜಾಗ್ರತೆ ವಹಿಸಿ ಎಂದು ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ದೇಶಕ್ಕೆ ಈಗಾಗಲೇ ನೈರುತ್ಯ ಮುಂಗಾರು ಪ್ರವೇಶ ಮಾಡಿದೆ. ಹವಾಮಾನ ಇಲಾಖೆ ಕೂಡ ಮಳೆಯ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಎಲ್ಲರೂ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದರು.
ಇನ್ನೂ ಹೆಚ್ಚು ಮಳೆ ಸುರಿಯುವ ಪರಿಣಾಮ ಜಲಾಶಯಗಳು ಕೂಡ ಭರ್ತಿಯಾಗಲಿವೆ. ಭರ್ತಿಯಾದ ಮೇಲೆ ಯಾವುದೇ ಕ್ಷಣಗಳಿಂದ ನದಿಗಳಿಗೆ ನೀರನ್ನು ಬಿಡಲಾಗುತ್ತದೆ. ಆದ್ದರಿಂದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಯಾರೂ ಕೂಡ ತುಂಬಿ ಹರಿಯುತ್ತಿರುವ ನದಿ ಬಳಿ ತೆರಳಬಾರದು ಎಂದು ಮನವಿ ಮಾಡಿದರು.
ಒಂದು ವೇಳೆ ಪ್ರವಾಹ ಎದುರಾದರೆ ಅದನ್ನು ನಿಭಾಯಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧತೆ ಕೈಗೊಂಡಿದೆ. ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು