ಬೆಂಗಳೂರು: ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ರಕ್ಕಸ ಮಳೆಗೆ ರಾಜ್ಯದ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮಳೆಯಿಂದ ಭಾರೀ ಅವಾಂತರ ಸೃಷ್ಟಿಸಿ ಜನರ ಜೀವನ ಮುರಾಬಟ್ಟೆಯಾಗಿಸಿಬಿಟ್ಟಿದೆ.
ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಉಡುಪಿ, ಚಿತ್ರದುರ್ಗ, ಕೋಲಾರ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಬೆಂಗಳೂರು ನಗರ, ಕರಾವಳಿ ಹಾಗೂ ಮಳೆನಾಡು ಭಾಗದ ಜಿಲ್ಲೆಗಳು ಸೇರಿದಂತೆ 17 ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆ ಬಿದ್ದಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಹಾಗೂ ರಾಜ್ಯದ ಒಳನಾಡಿನಲ್ಲಿ ಟ್ರಫ್ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯ ಪ್ರಮಾಣ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಬಯಲುಸೀಮೆ ಪ್ರದೇಶಗಳಾದ ಕೋಲಾರ, ತುಮಕೂರು, ರಾಮನಗರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಒಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದರೆ ಮತ್ತೊಂದೆಡೆ ಭಾರೀ ಮಳೆಯಿಂದ ಬೆಳೆ ಕಳೆದುಕೊಂಡು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆಯಾಗಲಿದೆ. ಬಹುತೇಕ ಕಡೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಲವೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.





