ಬೆಂಗಳೂರು: ಡೆಂಗ್ಯೂ ಟೆಸ್ಟಿಂಗ್ ಬೆಲೆ ಹೆಚ್ಚಳ ಕಂಡು ಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಪರವಾನಗಿ ರದ್ಧತಿಯಂತಹ ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡುವುದು ಮೊದಲ ಕೆಲಸವಾಗಬೇಕು. ಸಂಗ್ರಹವಾದ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ. ಅದನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬೇಕು.
ಈ ವಿಚಾರಗಳನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮನೆಗಳ ಮುಂದೆ ನೀರು ನಿಲ್ಲುತ್ತದೆ. ಡೆಂಗ್ಯೂ, ವೈರಲ್ ಜ್ವರ, ಸಾವು ಸಂಭವಿಸದಂತೆ ತಡೆಯಬೇಕು ಎಂದು ಸೂಚನೆ ನೀಡಿದರು.
ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಹೀಗಾಗಿ ಯಾರೂ ಕೂಡ ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡೆಂಗ್ಯೂನ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗ್ಯೂ ಪರೀಕ್ಷೆ ಮಾಡಿಸಿಕೊಳ್ಳಿ. ಯಾರೂ ಕೂಡ ನಿರ್ಲಕ್ಷ್ಯ ವಹಿಸಬೇಡಿ ಎಂದು ಮನವಿ ಮಾಡಿದರು.,