Mysore
19
overcast clouds
Light
Dark

ರಾಜ್ಯ ಸರ್ಕಾರ ಡೆಂಗ್ಯೂ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ

ಹಾವೇರಿ: ರಾಜ್ಯ ಸರ್ಕಾರ ಡೆಂಗ್ಯೂ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಹೋಗುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪುತ್ತಿದ್ದು, ಸರ್ಕಾರ ಅದನ್ನು ಮುಚ್ಚಿಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಡೆಂಗ್ಯೂ ಹೆಚ್ಚಳದ ಬಗ್ಗೆ ನಾನು ಮೊದಲೇ ಹೇಳಿದ್ದೆ. ಆದರೆ ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೋಗಿಗಳು ಪರದಾಡುತ್ತಿದ್ದಾರೆ. ಸಾವು-ನೋವು ಹೆಚ್ಚಾಗುತ್ತಿವೆ. ಈಗಾಗಲೇ ಹಲವಾರು ಸಾವಾಗಿದೆ. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಡೆಂಗ್ಯೂ ಸಾವು ಹಾವೇರಿಯಲ್ಲೇ ಆಗಿದೆ. ಕೂಡಲೇ ಡಿಹೆಚ್‌ಓ ವರ್ಗಾವಣೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ಇನ್ನೂ ಮುಂದುವರಿದು ಮಾತನಾಡಿದ ಅವರು, ಡೆಂಗ್ಯೂ ಕೇಸ್‌ ಹೆಚ್ಚಾಗದಂತೆ ತಡೆಯಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಿವೆ. ಇನ್ನಾದರೂ ಡೆಂಗ್ಯೂ ವೇಗವಾಗಿ ಹರಡುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.