Mysore
27
overcast clouds
Light
Dark

ರಾಜ್ಯದಲ್ಲಿ ಡೆಂಗ್ಯೂ ಆರ್ಭಟ: ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೋಗಗಳ ಕುರಿತು ರಾಜ್ಯದ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಪ್ರಸ್ತುತ ಡೆಂಗ್ಯೂ, ಚಿಕನ್‌ ಗುನ್ಯ ಹಾಗೂ ಝೀಕಾ ಸೇರಿದಂತೆ ಮುಂತಾದ ರೋಗಗಳು ಹರಡದಂತೆ ನಿಯಂತ್ರಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಶಾಲೆಗಳು ಸೇರಿದಂತೆ ಸಮುದಾಯದ ಸಹಭಾಗಿತ್ವದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಈ ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ವಹಿಸಬೇಕಾದ ಅಗತ್ಯ ಕ್ರಮಗಳ ಕುರಿತು ವಿಸ್ತೃತವಾದ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದೆ.

ಶಾಲಾ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಮತ್ತು ಇಲ್ಲಿನ ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಈ ಸನ್ನಿವೇಶಗಳಲ್ಲಿ ಶಾಲಾ ವಿದ್ಯಾರ್ಥಿಗಳು ಸುತ್ತಾಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸತಕ್ಕದ್ದು ಹಾಗೂ ಇವುಗಳನ್ನು ತೆರವುಗೊಳಿಸಲು ಹಾಗೂ ವಿಲೇವಾರಿ ಮಾಡಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಅಥವಾ ಆವರಣದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸಬೇಕು. ಇಂತಹ ಸನ್ನಿವೇಶಗಳನ್ನು ತೆರವುಗೊಳಿಸಲು ಮತ್ತು ಶಾಲಾ ಪರಿಸರಕ್ಕೆ ಸಾಂಕ್ರಾಮಿಕ ರೋಗ ನಿರೋಧಕ ದ್ರಾವಣಗಳನ್ನು ಕಾಲ-ಕಾಲಕ್ಕೆ ಸಿಂಪಡಿಸಲು ನಿಯಮಾನುಸಾರ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದೆ.

ಇದರ ಜೊತೆಗೆ ಶಾಲೆಗಳಲ್ಲಿನ ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಉಜ್ಜಿ ತೊಳೆಯಬೇಕು. ಮೈದಾನ ಸೇರಿದಂತೆ ಶಾಲೆಯ ಸುತ್ತಮುತ್ತ ಶುಚಿಯಾಗಿಡಬೇಕು. ವಿದ್ಯಾರ್ಥಿಗಳಲ್ಲಿ ಜ್ವರ ಪ್ರಕರಣಗಳು ವರದಿಯಾದಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಖಡಕ್‌ ಸೂಚನೆ ನೀಡಿದೆ.