Mysore
21
clear sky

Social Media

ಬುಧವಾರ, 28 ಜನವರಿ 2026
Light
Dark

ಈ ವರ್ಷ ಬಿಸಿಲ ಝಳವೂ ಹೆಚ್ಚಳ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ಈ ವರ್ಷ ಚಳಿ ಪ್ರಮಾಣ ಹೆಚ್ಚಾಗಿದ್ದರಿಂದ ಬಿಸಿಲ ಝಳವೂ ಹೆಚ್ಚಾಗಿರಲಿದ್ದು, ಮುಂದಿನ ಬೇಸಿಗೆಯಲ್ಲಿ ವಿಪರೀತ ಬಿಸಿಲು ಹವಾಮಾನ ಇರಲಿದೆ ಎಂಬುದು ಹವಾಮಾನ ತಜ್ಞರ ಲೆಕ್ಕಾಚಾರವಾಗಿದೆ.

ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಅಲ್ಲದೆ, ಫೆಬ್ರವರಿ 15ರಿಂದ ತಾಪಮಾನವು ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಬೇಸಿಗೆಯ ಆರಂಭವೂ ಆಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಪ್ರಸ್ತುತ ದಟ್ಟ ಮಂಜಿನ ನಡುವೆ ಬಿಸಿಲಿನ ಝಳವೂ ಹೆಚ್ಚಾಗುತ್ತಿದೆ. ಈಗಲೇ ಬೇಸಿಗೆಯಂತಾಗಿದೆ. ಬೆಳಗ್ಗೆ 10ರಿಂದಲೇ ಮೈಸುಡುವಷ್ಟು ಬಿಸಿಲು ಜನರನ್ನು ಬಾಧಿಸುತ್ತಿದೆ. ಬಿಸಿಲಿನ ಜತೆಗೆ ಧೂಳು ಹೆಚ್ಚಾಗಿದ್ದು, ವಾತಾವರಣ ಶುಷ್ಕತೆಯಿಂದ ಕೂಡಿದೆ. ಕಳೆದ ಒಂದು ವಾರದಿಂದಲೂ ಒಣಹವೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಈ ಬಾರಿ ಡಿಸೆಂಬರ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ಚಳಿಯಿತ್ತು. ಯಾವಾಗ ಚಳಿ ಹೆಚ್ಚಾಗಿರುತ್ತದೆಯೋ ಆ ಬಾರಿ ಬೇಸಿಗೆಯ ಪ್ರಖರತೆ ಕೂಡ ಹೆಚ್ಚಾಗಿರುತ್ತದೆ. ಅಂದರೆ ವಾಡಿಕೆಗಿಂತ ಹೆಚ್ಚು ಉಷ್ಣತೆ ದಾಖಲಾಗುತ್ತದೆ. ಫೆಬ್ರವರಿಯಲ್ಲೂ ಚಳಿಯ ಪ್ರಮಾಣ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಜನವರಿ ಅಂತ್ಯದ ವೇಳೆಗೆ ಚಳಿಯ ಪ್ರಭಾವ ಕುಗ್ಗುತ್ತದೆ. ಫೆಬ್ರವರಿಯಿಂದಲೇ ಬಿಸಿಲು ಆರಂಭವಾಗುತ್ತದೆ. ಶುಷ್ಕ ವಾತಾವರಣದಿಂದಾಗಿ ಜನರು ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಸೂರ್ಯನ ಪ್ರಖರ ಕಿರಣಗಳಿಂದ ಚರ್ಮ ಸುಡುವುದು, ಚರ್ಮದ ಅಲರ್ಜಿಗಳು, ಶ್ವಾಸಕೋಶ ತೊಂದರೆ, ಉಷ್ಣದ ಕೆಮ್ಮು, ತಲೆ ಸುತ್ತು, ಅಂಗೈ-ಅಂಗಾಲು ಉರಿ, ಉರಿ ಮೂತ್ರ, ಮಲಬದ್ಧತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಗಳಾಗಿವೆ. ಜತೆಗೆ ಬೇಸಿಗೆಯಲ್ಲಿ ಇವು ಹೆಚ್ಚಾಗಲಿವೆ ಎನ್ನುತ್ತಿದ್ದಾರೆ ವೈದ್ಯರು.

ಧೂಳು ಮತ್ತು ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಜತೆಗೆ, ಖಾಲಿ ಪ್ರದೇಶಗಳು, ಮರ-ಗಿಡಗಳ ಎಲೆಗಳ ಮೇಲೆ ಹೆಚ್ಚು ಧೂಳು ಕೂತಿರುತ್ತದೆ. ಇದರಿಂದ ಒಣ ಕೆಮ್ಮು ಹೆಚ್ಚಾಗುತ್ತಿದೆ. ಮಲಿನ ವಾತಾವರಣದಿಂದಾಗಿ ಬಂದ ಕೆಮ್ಮು ಬೇಗ ವಾಸಿಯಾಗದೆ ಜನರನ್ನು ಹೆಚ್ಚು ಬಾಧಿಸುತ್ತಿದೆ.

ರಾಜ್ಯವು ಸಾಮಾನ್ಯವಾಗಿ ಮಾರ್ಚ್ ಮತ್ತು ಮೇ ನಡುವೆ ಬಿಸಿ ಮತ್ತು ಆದ್ರ್ರತೆಯ ಪರಿಸ್ಥಿತಿಗಳೊಂದಿಗೆ ಬೇಸಿಗೆಯನ್ನು ಅನುಭವಿಸುತ್ತದೆ, ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಕರಾವಳಿ ಪ್ರದೇಶವು ಹೆಚ್ಚಿನ ಶಾಖ ಅನುಭವಿಸಿದರೆ, ಉತ್ತರ-ಒಳಾಂಗಣ ಪ್ರದೇಶಗಳು ತೀವ್ರ ಶಾಖವನ್ನು ಎದುರಿಸುತ್ತವೆ ಎಂದು ಎಚ್ಚರಿಕೆ ನೀಡಿದೆ.

Tags:
error: Content is protected !!