ಬೆಂಗಳೂರು: ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯದ ದೃಷ್ಠಿಯಿಂದ ಸಂಚಾರಿ ಆಸ್ಪತ್ರೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಆರೋಗ್ಯ ತಪಾಸಣೆ ನಡೆಸುವ 135 ʼಸಂಚಾರಿ ಆರೋಗ್ಯ ಘಟಕʼ ಆಂಬುಲೆನ್ಸ್ ವಾಹನಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಡೀ ದೇಶ ಕಾರ್ಮಿಕರ ಶ್ರಮವನ್ನು ಅವಲಂಬಿಸಿದೆ. ಸಮಾಜದಲ್ಲಿ ದುಡಿಯುವ ವರ್ಗ ಒಂದು ಕಡೆ ಇದ್ದರೆ, ದುಡಿಸಿಕೊಳ್ಳುವ ವರ್ಗ ಮತ್ತೊಂದು ಕಡೆ ಇದೆ. ಒಂದೇ ವರ್ಗದವರು ದುಡಿಯುತ್ತಿರಬಾರದು, ಎಲ್ಲಾ ವರ್ಗದವರು ದುಡಿಯಬೇಕು. ಆಗ ಮಾತ್ರ ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯ ಸಾಧ್ಯ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಆಸಕ್ತಿಯಿಂದ ಉಚಿತ ಸಂಚಾರಿ ಆಸ್ಪತ್ರೆಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರ ಸೆಸ್ ಹಣದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಉಚಿತ ಊಟ ಮತ್ತು ವಸತಿ ಶಾಲೆಗಳನ್ನು ತೆರೆಯಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.





