ಮೈಸೂರು: ಮೈಸೂರು-ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರ ಮತಯಾಚಿಸಿದ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ.
ಮತಯಾಚನೆ ವೇಳೆ ಮಾತನಾಡಿರುವ ಡಿಕೆ ಮಂಡ್ಯ ಮತ್ತು ಮೈಸೂರು ಜಿಲ್ಲೆಗೆ ಎಚ್.ಡಿ ಕುಮಾರಸ್ವಾಮಿ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
2018 ರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದಾಗ ಈ ಎರಡು ಜಿಲ್ಲೆಗಳಿಂದ ಮೂರು ಎಂಎಲ್‌ಸಿ, ಮೂರು ಜನ ಶಾಸಕರು ಹಾಗೂ ಸಾರಾ ಮಹೇಶ್, ಡಿಸಿ ತಮ್ಮಣ್ಣ, ಪುಟ್ಟರಾಜು ಸೇರಿದಂತೆ ಮಂತ್ರಿಗಳಿದ್ದರು ಸಹಾ ಕ್ಷೇತ್ರದ ಅಭಿವೃದ್ಧಿಗೆ ಅವರು ಯಾವುದೇ ಕೊಡುಗೆಯನ್ನು ಸಹಾ ನೀಡಿಲ್ಲ ಎಂದು ಕಿಡಿಕಾರಿದರು.
ಮೈಸೂರು, ಮಂಡ್ಯ ಭಾಗದ ಜನರು ಕಾಂಗ್ರೆಸ್ ನೆರವಿನಿಂದ ಪ್ರಧಾನಿಯಾದ ದೇವೇಗೌಡರನ್ನಾಗಲಿ, ಕಾಂಗ್ರೆಸ್‌ನಿಂದ ಎರಡೆರೆಡು ಬಾರಿ ಸಿಎಂ ಆದ ಎಚ್‌ಡಿಕೆಯನ್ನಾಗಲಿ ನೆನೆಯುವುದಿಲ್ಲ. ಇವರಿಂದ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಬಿಟ್ಟು, ಬೇರೆ ಯಾವುದೇ ಕಾಮಗಾರಿಯಾಗಿಲ್ಲ. ಹಾಗಾಗಿ ಇಲ್ಲಿನ ಜನತೆ ಎಸ್.ಎಂ ಕೃಷ್ಣ, ದೇವರಾಜು ಅರಸು, ಸಿಎಂ ಸಿದ್ದರಾಮಯ್ಯ ಹಾಗೂ ಶಂಕರೇಗೌಡ, ಮಾದೇಗೌಡರನ್ನು ನೆನೆಯುತ್ತಾರೆ ಎಂದು ಟೀಕಿಸಿದರು.