Mysore
20
overcast clouds
Light
Dark

ಸಿಎಂ ಪರಿವಾರ ರಕ್ಷಿಸಲು RTI ಕಾರ್ಯಕರ್ತರ ವಿರುದ್ಧ ದೂರು: ಎಚ್‌ಡಿಕೆ ಆರೋಪ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನ ಮೂಡದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಗರಣಗಳನ್ನು ಪ್ರಶ್ನಿಸಿದ ಪ್ರತಿಪಕ್ಷಗಳನ್ನು ವಿಧಾನಮಂಡಲದಲ್ಲಿ ಹತ್ತಿಕ್ಕಲಾಯಿತು! ಸತ್ಯಶೋಧನೆಯಲ್ಲಿ ನಿರತರಾದ ಆರ್‌ಟಿಐ ಕಾರ್ಯಕರ್ತರನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ದಮನ ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಮುಖ್ಯಮಂತ್ರಿಗಳ ಕುಟುಂಬ ಮೈಸೂರಿನ ಮೂಡಾದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ ಅರ್‌ಟಿಐ ಕಾರ್ಯಕರ್ತರನ್ನು ಕಾಂಗ್ರೆಸ್ ಗುರಿ ಮಾಡಿಕೊಂಡಿದೆ. ಆರೋಪಿತ ಸ್ಥಾನದಲ್ಲಿರುವ ಸಿಎಂ ಪರಿವಾರವನ್ನು ರಕ್ಷಿಸುವ ಏಕೈಕ ದುರುದ್ದೇಶದಿಂದ ಕಾಂಗ್ರೆಸ್ಸಿಗರು ಆರ್‌ಟಿಐ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಿದೆ ಈ ನಾಟಕ ಎಂದು ಎಚ್‌ಡಿಕೆ ಟೀಕಾ ಪ್ರಹಾರ ನಡೆಸಿದ್ದಾರೆ.

ಪೊಲೀಸ್ ಬಲ ಬಳಸಿ ಸತ್ಯದ ಕತ್ತು ಹಿಚುಕಲು ಸಾಧ್ಯವೇ ಇಲ್ಲ. ಹಾದಿಬೀದಿಯಲ್ಲಿ ಜನರ ಕೈಗೆ ಸಿಕ್ಕಿರುವ ದಾಖಲೆಗಳೇ ಮೂಡಾ ಹಗರಣದ ‘ಅಸಲಿ ಕೈ’ ಯಾವುದು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದ ಮೇಲೆ ಸತ್ಯವನ್ನು ಹೆಕ್ಕಿ ತೆಗೆದ ಆರ್‌ಟಿಐ ಕಾರ್ಯಕರ್ತರ ಮೇಲೆ ರಾಜ್ಯ ಕಾಂಗ್ರೆಸ್ ಪಕ್ಷ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ದೂರಿದ್ದಾರೆ.

ದೂರು ನೀಡಿರುವ ಪ್ರಸಂಗ ಹೇಗಿದೆ ಎಂದರೆ, ಬದಲಿ ನಿವೇಶನ ಫಲಾನುಭವಿಗಳು ಪರೋಕ್ಷವಾಗಿ ಸತ್ಯ ಒಪ್ಪಿಕೊಂಡಂತೆ ಆಗಿದೆ. ಅಷ್ಟೇ ಅಲ್ಲ ಆರ್‌ಟಿಐ ಕಾರ್ಯಕರ್ತರ ಟಾರ್ಗೆಟ್ ಮಾಡಿದಷ್ಟು ಮೂಡಾದ ಮೂಲೆಮೂಲೆಗಳಲ್ಲಿ ಮುಗ್ಗುತ್ತಿರುವ ಸತ್ಯಗಳು ಮತ್ತಷ್ಟು ವ್ಯಘ್ರವಾಗಿ ಹೂಂಕರಿಸುತ್ತವೆ. ಇಂಥ ವ್ಯರ್ಥ ಕೆಲಸ ಬಿಟ್ಟು ಮರ್ಯಾದೆಯಿಂದ ಸತ್ಯವನ್ನು ಎದುರಿಸುವುದು ಸಿಎಂ ಆದವರಿಗೆ ಶೋಭೆ ತರುತ್ತದೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.