ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಯಾವುದೇ ಪ್ರಸ್ತಾಪ ಸರ್ಕಾರ ಅಥವಾ ಪಕ್ಷದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್‌ಗೆ ಕಾಂಗ್ರೆಸ್ ಹೈಕಮಾಂಡ್ ಯಾವಾಗ ವಿಷಯ ತಿಳಿಸಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿಯೇ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಡುವೆ ಹೊಂದಾಣಿಕೆ ಇದೆ. ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಸಮಸ್ಯೆ ಇಲ್ಲ ಎಂಬುದಕ್ಕೆ ನಿನ್ನೆ ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಲಕ್ಷಾಂತರ ಜನ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದರು. ವಿರೋಧ ಪಕ್ಷಗಳು ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಿವೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ನಡೆಯುತ್ತಿದ್ದರೆ ದಾಖಲಾತಿಗಳನ್ನು ತನಿಖಾ ಸಂಸ್ಥೆಗೆ ಕೊಡಲಿ. ಎಚ್.ವಿಶ್ವನಾಥ್ ಹಿರಿಯ ರಾಜಕಾರಣಿ. ಅವರು ಮಾತನಾಡುವಾಗ ಅದರಲ್ಲಿ ಸತ್ಯಾಂಶ ಇರಬೇಕು. ಆಧಾರಗಳಿರಬೇಕು ಎಂದು ಹೇಳಿದರು.





