ಹಾವೇರಿ : ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ 13 ಜನರು ಮೃತಪಟ್ಟಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಗಣ್ಯರು ಸಂತಾಪವನ್ನು ಸೂಚಿಸಿದ್ದರು. ಇದೀಗ ಈ ಅಪಘಾತಕ್ಕೆ ಕಾರಣವಾದ ಅಂಶಗಳು ಯಾವುವು ಎಂಬುವುದರ ಬಗ್ಗೆ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅಪಘಾತದಲ್ಲಿ 13 ಜನ ಸಾವನ್ನಪ್ಪಿರುವ ವಿಚಾರ ತಿಳಿದು ಬಹಳ ನೋವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಅಪಘಾತಕ್ಕೆ ಏನು ಕಾರಣ ಎಂಬುವುದರ ಬಗ್ಗೆಯೂ ಟ್ವೀಟ್ ಮಾಡಿದ್ದು, ತಪ್ಪಾದ ಸ್ಥಳದಲ್ಲಿ ಲಾರಿ ಪಾರ್ಕಿಂಗ್ ಮಾಡಿರುವುದು, ತಪ್ಪಾಗಿ ಓವರ್ ಟೇಕಿಂಗ್ ಮಾಡಿರಬಹುದು. ಅಥವಾ ಅತಿಯಾದ ವೇಗ , ಇಲ್ಲ ಚಾಲಕ ಆಯಾಸಗೊಂಡಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಿದ್ದಾರೆ.
ಇನ್ನು ಅಪಘಾತ ಸ್ಥಳಕ್ಕೆ ಭೇಟಿ ನೀಡುವುದಾಗಿ ಮಾಹಿತಿ ನೀಡಿ, ಜಾಗರೂಕತೆಯಿಂದ ವಾಹನ ಚಲಾಯಿಸಿ, ಜೀವ ರಕ್ಷಿಸಿ ಎಂದು ಬರೆದುಕೊಂಡಿದ್ದಾರೆ.





