ಹಾಸನ: ಕೆರೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ನೀರಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ(ಮೇ.16) ನಡೆದಿದೆ.
ಮೃತರನ್ನು ಹಾಸನದ ಮುತ್ತಿಗೆ ಗ್ರಾಮದ ಜೀವನ್(13) ಸಾತ್ವಿಕ್(11) ವಿಶ್ವಸ್ (12) ಪೃಥ್ವಿ(12) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸ್ನೇಹಿತ ಚಿರಾಗ್ ದಡ ತಲುಪಿ ಸಾವಿನಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಮಕ್ಕಳು ಈಜಾಡಲು ತಿಮ್ಮನಹಳ್ಳಿಯ ಕೆರೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮೊದಲು ಜೀವನ್ ನೀರಿನಲ್ಲಿ ಮುಳುಗಿದ್ದಾನೆ. ನಂತರ ಅವನನ್ನು ರಕ್ಷಿಸುವಾಗ ಉಳಿದವರು ಮುಳುಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಚಿಕಿತ್ಸಾ ವಿಭಾಗದ ಅಧಿಕಾರಿಗಳು ಮತ್ತು ಈಜುಗಾರರ ಸಹಾಯದಿಂದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರಿನ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಘಟನ ಸ್ಥಳಕ್ಕೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.