ಬೆಂಗಳೂರು : ಸಹಕಾರ ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ಕುರಿತು ಸಮಗ್ರ ವಿವರಣೆಗಳನ್ನೊಳಗೊಂಡಂತೆ ನೀಡಿದ್ದ ಮನವಿಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಿದ್ದಾರೆ.
ನಿನ್ನೆ ಸಂಜೆ ಬೆಂಗಳೂರಿನಲ್ಲಿ ರಾಜಣ್ಣ ಅವರಿಂದ ಮನವಿ ಸ್ವೀಕರಿಸಿದ್ದ ಪರಮೇಶ್ವರ್ ಸಂಜೆಯೇ ಡಿಜಿಪಿಯವರಿಗೆ ಮನವಿ ರವಾನಿಸಿದ್ದು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಈ ಮೂಲಕ ಹನಿಟ್ರ್ಯಾಪ್‌ನ ಮನವಿ ಪೊಲೀಸ್ ಇಲಾಖೆಯ ಅಂಗಳಕ್ಕೆ ಜಾರಿದೆ. ಈ ಮೊದಲು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಸಚಿವ ಪರಮೇಶ್ವರ್ ತನಿಖೆ ನಡೆಸುವುದಾಗಿ ಹೇಳಿದ್ದರು. ರಾಜಣ್ಣ ಕೂಡ ದೂರು ನೀಡುವುದಾಗಿ ತಿಳಿಸಿದ್ದರು. ಆದರೆ ದೂರಿನ ಬದಲಾಗಿ ಮನವಿ ಸಲ್ಲಿಸಿದ್ದಾರೆ.
ಮನವಿಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಹೀಗಾಗಿ ಮನವಿಯ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹಸಚಿವರು ಸೂಚಿಸಿದ್ದಾರೆ.
ಈ ಮೊದಲು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಪರಮೇಶ್ವರ್ ಹೇಳಿದ್ದರು. ವಿರೋಧಪಕ್ಷಗಳು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸುವಂತೆ ಪಟ್ಟು ಹಿಡಿದಿದ್ದವು. ರಾಜ್ಯಸರ್ಕಾರ ಎಸ್‌ಐಟಿ ರಚಿಸಿ ತನಿಖೆ ಮುಂದುವರೆಸುವ ಇರಾದೆಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.





