ಬೆಂಗಳೂರು: ಬಿಜೆಪಿ ಅವಧಿ ಸರ್ಕಾರದ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾ. ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯನ್ನು ಅಂಗೀಕರಿಸಿದ್ದು, ಎಸ್‌ಐಟಿ ರಚನೆ ಮಾಡುವುದರ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಏಪ್ರಿಲ್.11) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿಯನ್ನು ಅಂಗೀಕರಿಸಲಾಯಿತು. ರಾಜ್ಯ ಗುತ್ತಿಗೆದಾರ ಸಂಘವೂ ಕಳೆದ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆಂದು ಆರೋಪ ಮಾಡಿದ್ದರು. ಈ ಆರೋಪದ ಮೇಲೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಸಲ್ಲಿಸಲು ಹೇಳಿತ್ತು ಎಂದರು.
ಈ ವರದಿಯನ್ನು ಕೆಲ ದಿನಗಳ ಹಿಂದೆ ನ್ಯಾಯಮೂರ್ತಿ ನಾಗಮೋಹನ ದಾಸ್ ಸಲ್ಲಿಸಿದ್ದರು. ಆದರೆ ಇಂದು ಅದನ್ನು ಸಚಿವ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಲಾಗಿದೆ. ಅಲ್ಲದೇ ಬಿಜೆಪಿ ಅವಧಿಯ 40% ಕಮಿಷನ್ ಆರೋಪದ ಬಗ್ಗೆ ಪರಿಶೀಲನೆಗಾಗಿ ಎಸ್ಐಟಿ ತಂಡ ರಚಿಸಲು ತೀರ್ಮಾನ ಮಾಡಿದ್ದೇವೆ. ಜತೆಗೆ ಸಂಪುಟ ಸಭೆಯಲ್ಲಿ 21 ವಿಷಯಗಳ ಮೇಲೆ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದರು.





