Mysore
19
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಅಂತೂ ನನ್ನ ಅನುಮಾನ ನಿಜವಾಯಿತು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌

c m siddaramaiah, h d kumaraswamy

ಬೆಂಗಳೂರು: ಜಾತಿ ಗಣತಿ ವರದಿ ಬಗ್ಗೆ ಸಿಎಂ ಸಿದ್ದರಾಮಯ್ಯ (C M Siddaramaiah) ಈಗ ಉಲ್ಟಾ ಹೊಡೆದಿದ್ದು, ಅಂತೂ ನನ್ನ ಅನುಮಾನ ಈಗ ನಿಜವಾಯಿತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H D Kumaraswamy) ಹೇಳಿದ್ದಾರೆ. ಸಿದ್ದರಾಮಯ್ಯನವರು ಈಗ ಉಲ್ಟಾ ಹೊಡೆದಿದ್ದಾರೆ! ‘ಅದು ಜಾತಿ ಸಮೀಕ್ಷೆ ಅಲ್ಲ.. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ಎಂದು ಹೊಸ ಪೀಪಿ ಊದುತ್ತಿದ್ದಾರೆ.

ಹಾಗಾದರೆ ಹಾದಿ ಬೀದಿಯಲ್ಲಿ ತೇಲಾಡುತ್ತಿರುವ, ಬಿದ್ದೂ ಬಿದ್ದು ಹೊರಳಾಡುತ್ತಿರುವ ಅಂಕಿ ಸಂಖ್ಯೆಗಳು ಏನು? ಸೋರಿಕೆಯಾಗಿರುವ ದತ್ತಾಂಶ ಮತ್ತು ಸಿಎಂ ಅವರು ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶವು ಎರಡೂ ಒಂದೇನಾ? ಅಥವಾ ಅಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.

ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು? ಅದರ ಹಿಂದಿರುವ ಕಳ್ಳ ಕೈ ಯಾವುದು? ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ?

ಸಿಎಂ ಸಾಹೇಬರೇ.. ಸೋರಿಕೆ ಬಗ್ಗೆ ತಪ್ಪದೇ ತನಿಖೆ ಮಾಡಿಸಿ. ಅದು ಆಯೋಗದಿಂದ ಸೋರಿಕೆ ಆಯಿತಾ? ಅಥವಾ ಸಂಪುಟದಲ್ಲಿ ಸಚಿವರ ಕೈ ಸೇರಿದ ಮೇಲೆ ಸೋರಿಕೆ ಆಯಿತಾ? ಅಥವಾ ನಿಮ್ಮ ಗ್ಯಾಂಗ್ ಕೈ ಚಳಕವಾ? ತನಿಖೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೀರಾ? ನೀವೇ ಹೇಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಸೋರಿಕೆಗೆ ನಿಮ್ಮ ಸರಕಾರವೇ ಹೊಣೆ, ಅದರಲ್ಲಿ ಯಾವುದೇ ಸಂಶಯವೇ ಇಲ್ಲ. ಯಾವುದೇ ಕಾರಣಕ್ಕೂ ಸೋರಿಕೆಯಾದ ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು. ಮಂಡಿಸಿ ಸಂಪುಟದ ಪಾವಿತ್ರ್ಯತೆ ಹಾಳು ಮಾಡಬೇಡಿ. ನೆಮ್ಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಾಕಿದ್ದೀರ. ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ. ನಿಮ್ಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

Tags:
error: Content is protected !!