ಬೆಂಗಳೂರು: ಮಹಿಳಾ ಸಬಲೀಕರಣ ಗುರಿಯಾಗಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮಾನ್ ಯಾಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು (ಫೆ.7) ನಗರಕ್ಕೆ ಭೇಟಿ ನೀಡಿದ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಶಾಲಿನಿ ರಜನೀಶ್ ʼಒಂದು ರಾಜ್ಯ, ಹಲವು ಜಗತ್ತುʼ ಕುರಿತಾದ ಪುಸ್ತಕವನ್ನು ಫಿಲೆಮನ್ ಅವರಿಗೆ ಉಡುಗೊರೆಯಾಗಿ ನೀಡಿದರು.
ರಾಜ್ಯ ಮಹಿಳೆಯರ ಸಬಲೀಕರಣದಲ್ಲಿ ಈ ಗ್ಯಾರಂಟಿ ಯೋಜನೆಗಳು ಹೇಗೆ ನೆರವಾಗುತ್ತಿವೆ ಎಂಬುದರ ಬಗ್ಗೆ ಶಾಲಿನಿ ರಜನೀಶ್ ಅವರು ವಿವರಿಸಿದರು.
ಇದೇ ವೇಳೆ ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ದಿ, ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಕಾರ್ಯಗಳ ಉತ್ತೇಜನಕ್ಕೆ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು ಎಂದು ತಿಳಿಸಿದೆ.





