ಬೆಂಗಳೂರು: ಗೃಹಲಕ್ಷ್ಮೀ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವ ಉದ್ದೇಶದಿಂದ “ಗೃಹಲಕ್ಷ್ಮೀ ಸಂಘ” ಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿಂದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಂದ ಸ್ವಸಹಾಯ/ಸ್ತ್ರೀ ಶಕ್ತಿ ಗುಂಪುಗಳನ್ನು ರಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ‘ಗೃಹಲಕ್ಷ್ಮಿ’ ಸಂಘವನ್ನು ರಚಿಸಲಾಗುವುದು ಎಂದರು.
ರಾಜ್ಯದಲ್ಲಿ ಗೃಹಲಕ್ಷ್ಮಿಯೋಜನೆಯಡಿ 1.25 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯ ಆಗುತ್ತಿರುವ 2 ಸಾವಿರ ರೂಪಾಯಿ ಹಣವನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲಾಗುವುದು. ಈ ಮೂಲಕ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವುದೇ ಇದರ ಉದ್ದೇಶವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆಯ್ದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶ ಹೊಂದಲಾಗಿದೆ. ನಂತರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ- ಗ್ರಾಮೀಣ ಪ್ರದೇಶಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಹೇಳಿದರು.





