ಬೆಳಗಾವಿ: ಇನ್ನೂ ಕೇವಲ ಎಂಟು ದಿನಗಳಲ್ಲಿ ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನಾದರೂ ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲ್ಲೂಕು ಪಂಚಾಯಿತಿ ಮುಖಾಂತರ ಬಿಡುಗಡೆ ಮಾಡಬೇಕು ಎಂದು ಹೇಳಿರುವುದರಿಂದ ಸ್ವಲ್ಪ ತಡವಾಗಿದೆ ಎಂದರು.
ಇನ್ನು ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಹಣ ನಿಲ್ಲೋದಿಲ್ಲ. ಇನ್ನು 8-10 ದಿನಗಳಲ್ಲಿ ಹಣ ಖಾತೆಗೆ ಜಮೆ ಆಗುತ್ತದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡೇ ಮಾಡುತ್ತೇವೆ. ಯಾರೂ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಭರವಸೆ ನೀಡಿದರು.
ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಕುರಿತು ಮಾತನಾಡಿದ ಅವರು, ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಘಟನೆ ನಡೆದ ಐದೇ ನಿಮಿಷಕ್ಕೆ ಕಮೀಷನರ್ ಜೊತೆ ನಾನು ಮಾತನಾಡಿದ್ದೆ. ಯಾರು ತಪ್ಪಿತಸ್ಥರು ಅವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದೇನೆ. ನಾಲ್ಕೈದು ಪುಂಡರು ಬಂದು ಭಾಷಾ ವಿವಾದ ಎಳೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ಕಿಡಿಕಾರಿದರು.





