ಬಳ್ಳಾರಿ: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೇಲೆ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಎರಡು ಮೂರು ತಿಂಗಳ ಗೃಹಲಕ್ಷ್ಮೀ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂಬುದಾಗಿ ಪ್ರಶ್ನಿಸಿದ್ದಕ್ಕೆ ಗರಂ ಆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅದೆಲ್ಲಾ ಸುಳ್ಳು ಆರೋಪ. ಮೇ ತಿಂಗಳ ಕಂತಿನ ಹಣವನ್ನು ಮೇ.೫ರಂದೇ ಜಮಾ ಮಾಡಿದ್ದೇವೆ. ಆದರೆ ಜೂನ್ ಹಾಗೂ ಜುಲೈ ತಿಂಗಳ ಕಂತುಗಳು ಇನ್ನೂ ಜಮಾ ಆಗಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಅವೂ ಕೂಡ ಮಹಿಳೆಯರ ಖಾತೆಗೆ ಜಮಾ ಆಗಲಿವೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮೀ ಹಣ ಬಂದಿದೆ. ಉಳಿದವರಿಗೂ ಇನ್ನೆರಡು ದಿನಗಳಲ್ಲಿ ಬಾಕಿ ಹಣವನ್ನು ಡಿಟಿಬಿ ಮಾಡುತ್ತೇವೆ. ಮೊದಲು ಜೂನ್ ತಿಂಗಳ ಬಾಕಿ ತಲುಪಿಸುತ್ತೇವೆ. ಜುಲೈ.೧೫ನೇ ತಾರೀಖಿನ ನಂತರ ಜುಲೈ ತಿಂಗಳ ಕಂತನ್ನು ಹಾಕುತ್ತೇವೆ ಎಂದು ಮಾಹಿತಿ ನೀಡಿದರು.
ಇನ್ನೂ ಎಸ್‌ಸಿ, ಎಸ್‌ಟಿ ಹಣವನ್ನು ಕೂಡ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದೇವೆ. ಅದರಲ್ಲೂ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಹಿಂದುಳಿದ ವರ್ಗಗಳಿಗೆ ಮೊದಲ ಆದ್ಯತೆ ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿಗರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.





