ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ವಿಳಂಬವಾಗಿರುವುದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಗೆ ಮಂಡ್ಯದಲ್ಲಿ ಡಿಪಿಟಿಗೆ ಫುಷ್ ಮಾಡಿ ಮೂರು ದಿನಗಳಾಗಿವೆ. ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ದೊರಕಬೇಕಿದೆ. ಬ್ಯಾಂಕ್‌ಗಳಿಗೆ ಹಣ ಕಳುಹಿಸಿರುತ್ತೇವೆ. ದೊಡ್ಡ ಮೊತ್ತದ ಹಣ ಆಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬ ಆಗುತ್ತಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಜೂನ್ ತಿಂಗಳ ಹಣ ಈಗಾಗಲೇ ವರ್ಗಾವಣೆಯಾಗಿದೆ. ಜುಲೈ ತಿಂಗಳ ಹಣ ಇನ್ನೆರಡು ದಿನಗಳಲ್ಲಿ ವರ್ಗಾವಣೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಆಗಸ್ಟ್ ತಿಂಗಳ ಹಣ ಕೂಡ ಖಾತೆಗೆ ವರ್ಗಾವಣೆ ಮಾಡುತ್ತೇವೆ. ವಿಳಂಬ ಮಾಡಬಾರದು ಎಂಬುದೇ ನಮ್ಮ ಉದ್ದೇಶ. ಆದರೂ ತಾಂತ್ರಿಕ ದೋಷದಿಂದ ಖಾತೆಗೆ ವರ್ಗಾವಣೆಯಾಗಲು ಸ್ವಲ್ಪ ವಿಳಂಬವಾಗುತ್ತಿದೆ ಎಂದರು.
ಹಣ ವರ್ಗಾವಣೆ ವಿಳಂಬವಾಗದಿರಲು ನಮ್ಮ ತಂಡ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಯಜಮಾನಿಯರಿಗೂ ಗೃಹಲಕ್ಷ್ಮೀ ಹಣ ಬಂದೇ ಬರುತ್ತದೆ. ವದಂತಿಗಳಿಗೆ ಯಾರೂ ಕೂಡ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.