ಬೆಂಗಳೂರು: ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಮುಷ್ಕರಕ್ಕೆ ಇಳಿದಿದ್ದ ಬಿಎಂಟಿಸಿ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.
ಕಳೆದ 3 ವರ್ಷಗಳಿಂದ ಸಾರಿಗೆ ಇಲಾಖೆ ವೇತನ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿ ಬಿಎಂಟಿಸಿ ಸಿಬ್ಬಂದಿ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ವೇತನ ಬಾಕಿ ಉಳಿಸಿಕೊಂಡಿರುವ ಪರಿಣಾಮ ನಮಗೆ ಜೀವನ ನಡೆಸುವುದೇ ಬಲು ಕಷ್ಟ ಎಂದು ಬಿಎಂಟಿಸಿ ಸಿಬ್ಬಂದಿ ಸರ್ಕಾರದ ವಿರುದ್ಧ ಭಾರೀ ಅಸಮಾಧಾನ ಹೊರಹಾಕಿದ್ದರು.
ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ವೇತನದ ಜೊತೆಗೆ ನಮಗೆ ವೇತನ ಹೆಚ್ಚಳ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೂ ರಾಜ್ಯ ಸರ್ಕಾರ ಮಾತ್ರ ಬಿಎಂಟಿಸಿ ಸಿಬ್ಬಂದಿ ಮನವಿಗೆ ಕ್ಯಾರೇ ಎಂದಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸಿಬ್ಬಂದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆಯಿಂದ ಎಚ್ಚೆತ್ತ ಸರ್ಕಾರ ಮುಂದಿನ 6 ತಿಂಗಳು ಯಾವುದೇ ಪ್ರತಿಭಟನೆ ಮಾಡುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ನೌಕರರ ಪ್ರತಿಭಟನೆ ತಡೆಯಲು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನೌಕರರಿಗೆ ಭಾರೀ ನಿರಾಸೆ ಆಗಿದೆ ಎನ್ನಲಾಗುತ್ತಿದೆ.